ಕೂಡಿಗೆ, ಏ. 28: ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸೋಮವಾರಪೇಟೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಮಂಜುಳಾ ಉದ್ಘಾಟಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಈ ರೀತಿಯ ಶಿಬಿರಗಳು ನಡೆಯುವದರಿಂದ ಮಕ್ಕಳ ಪ್ರತಿಭೆಯು ಹೊರಹೊಮ್ಮಲು ಅನುಕೂಲವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ಶಿಬಿರದಲ್ಲಿ ಎಲ್ಲಾ ಮಕ್ಕಳು ಒಂದೆಡೆ ಸೇರುವದರ ಮೂಲಕ ಉತ್ತಮ ಮನೋಭಾವನೆ ಬೆಳೆಯುವದು ಎಂದರು.
ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಯಶೋದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಸೋಮವಾರಪೇಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಲೀಲಾವತಿ ಇದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಂಕರಯ್ಯ, ಗಣೇಶ್, ಪ್ರಭಾ, ಮೀರಾ ಶಿಬಿರದಲ್ಲಿ ಯೋಗ, ಹಾಡುಗಾರಿಕೆ, ನೃತ್ಯ, ಕಥೆ, ಕವನ ಹೇಳುವದು, ಚಿತ್ರಕಲೆ, ದೈಹಿಕ ವಿಚಾರಕ್ಕೆ ಸಂಬಂಧಪಟ್ಟಂತೆ ತಿಳುವಳಿಕೆ ನೀಡಿದರು. ಶಿಬಿರದಲ್ಲಿ 100 ಮಕ್ಕಳು ಪಾಲ್ಗೊಂಡಿದ್ದರು. ಶಿಬಿರಕ್ಕೆ ಮುಳ್ಳುಸೋಗೆ, ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನೀಡಿದರು.
ಇದೇ ಸಂದರ್ಭ ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಭೇಟಿ ನೀಡಿ, ಶಿಬಿರದಲ್ಲಿ ಮಕ್ಕಳ ತೊಡಗುವಿಕೆಯ ಬಗ್ಗೆ ವಿಚಾರಿಸಿದರು.