ಪೊನ್ನಂಪೇಟೆ, ಏ. 28: ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಬಿದ್ದಾಟಂಡ ಕಪ್ ಆಯೋಜಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಇದರಿಂದಾಗಿ ಬದ್ದತೆಯಿಂದ ಬಂದು ಪಂದ್ಯವಾಡುವ ತಂಡಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೇಚಮಾಡ ಕುಟುಂಬಸ್ಥರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಚಮಾಡ ಕುಟುಂಬದ ಕ್ರೀಡಾ ಸಮಿತಿ ಅಧ್ಯಕ್ಷ ಕೇಚಮಾಡ ಜೀತ್ ಪೂಣಚ್ಚ, ಟೈಸ್ ಪ್ರಕಾರ ಏ.28ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ 1ನೇ ಮೈದಾನದಲ್ಲಿ ಕೇಚಮಾಡ ಮತ್ತು ನೆಲ್ಲಮಕ್ಕಡ ತಂಡಗಳ ನಡುವೆ ಪಂದ್ಯಾಟ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಚಮಾಡ ತಂಡ ಸಮಯಕ್ಕೆ ಸರಿಯಾಗಿ ಮೈದಾನಕ್ಕೆ ತೆರಳಿದಾಗ ಈ ಪಂದ್ಯ ನಾಳೆಗೆ ಮುಂದೂಡಲಾಗಿದೆ ಎಂಬ ವಿಚಾರ ತಿಳಿಯಿತು. ಆದರೆ ಪಂದ್ಯ ಮುಂದೂಡಲ್ಪಟ್ಟ ವಿಷಯವನ್ನು ಮೊದಲೇ ತಿಳಿಸಬೇಕಾದ ಆಯೋಜಕರು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ದೂರದಿಂದ ನಾಪೋಕ್ಲುಗೆ ತೆರಳಿದ ಕೇಚಮಾಡ ಹಾಕಿ ತಂಡ ಸಮಯವನ್ನು ವ್ಯರ್ಥಗೊಳಿಸಿ ಬರಿಗೈಯಲ್ಲಿ ಮರಳುವಂತಾಯಿತು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಂದ್ಯ ಮುಂದೂಡಲ್ಪಟ್ಟ ವಿಚಾರ 2 ತಂಡಗಳಿಗೆ ಮೊದಲೇ ತಿಳಿಸಬೇಕಿದ್ದರೂ, ಬಿದ್ದಾಟಂಡ ಕಪ್ ಆಯೋಜಕರು ಕೇವಲ ನೆಲ್ಲಮಕ್ಕಡ ತಂಡದವರಿಗೆ ಮಾತ್ರ ಪೂರ್ವ ಮಾಹಿತಿಯನ್ನು ನೀಡಿದ್ದಾರೆ. ಇದರಿಂದಾಗಿ 1 ದಿನದ ಸಮಯ ಅನಗತ್ಯವಾಗಿ ವ್ಯರ್ಥವಾಯಿತು ಎಂದು ಆರೋಪಿಸಿದ ಅವರು, ಈ ವಿಚಾರ ನೆಲ್ಲಮಕ್ಕಡ ತಂಡದವರಿಗೆ ತಿಳಿಸಿದಂತೆ ಕೇಚಮಾಡ ಕುಟುಂಬಸ್ಥರಿಗೂ ತಿಳಿಸುವ ಸೌಜನ್ಯ ತೋರದಿರುವದು ಸರಿಯಲ್ಲ. ಆದ್ದರಿಂದ ಇದನ್ನು ಖಂಡಿಸಿ ಏ.29 ರಂದು ಶನಿವಾರ (ಇಂದು) ನಡೆಯುವ ಪಂದ್ಯಾವಳಿಯಲ್ಲಿ ಕೇಚಮಾಡ ತಂಡ ಭಾಗವಹಿಸದೆ ದೂರ ಉಳಿಯುವದಾಗಿ ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಕೇಚಮಾಡ ತಂಡದ ವ್ಯವಸ್ಥಾಪಕರಾದ ನಟೇಶ್ ತಿಮ್ಮಯ್ಯ, ತರಬೇತುದಾರರಾದ ವಿಶು ತಮ್ಮಯ್ಯ, ಕಾನೂರು ಗ್ರಾ.ಪಂ. ಸದಸ್ಯ ಕೇಚಮಾಡ ಸಿದ್ದು ನಾಚಪ್ಪ ಮತ್ತು ಕೇಚಮಾಡ ಜೆ. ರಾಕೇಶ್ ಉಪಸ್ಥಿತರಿದ್ದರು.