ಮಡಿಕೇರಿ, ಏ. 28: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಮುಂಗಾರಿನಲ್ಲಿ ಪ್ರಾಕೃತಿಕ ತೊಂದರೆಗಳ ನಡುವೆ ಇನ್ನಷ್ಟು ಸಮಸ್ಯೆ ಜಟಿಲವಾಗದಂತೆ ಮುಂಜಾಗ್ರತಾ ಕ್ರಮ ಅನುಸರಿಸ ಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.ಇಂದು ಕೋಟೆಯ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಆಲಿಸಿದ ಶಾಸಕ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆಸ್ಕಾಂ ಅಧಿಕಾರಿಗಳಿಂದ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ ಜಿಲ್ಲೆಯಲ್ಲಿ ಸರಾಸರಿ 650 ರಿಂದ 700 ಸಿಬ್ಬಂದಿ (ಲೈನ್‍ಮನ್‍ಗಳು) ಅಗತ್ಯವಿದ್ದರೂ, ಶೇ.50ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಬಗ್ಗೆ ಶಾಸಕರು ಚೆಸ್ಕಾಂ ಮುಖ್ಯಸ್ಥರ ಗಮನ ಸೆಳೆದರು. ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕಿರಣ್‍ಕುಮಾರ್ ಅವರಿಗೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ ಶಾಸಕ ಅಪ್ಪಚ್ಚು ರಂಜನ್ ಕೊಡಗಿಗೆ ಅಗತ್ಯ ಸಿಬ್ಬಂದಿ ನಿಯೋಜಿಸುವ ಮೂಲಕ ಮಳೆಗಾಲದಲ್ಲಿ ಎದುರಾಗ ಬಹುದಾದ ತೊಂದರೆ ತಪ್ಪಿಸಲು ಒತ್ತು ನೀಡುವಂತೆ ಸಲಹೆ ಮಾಡಿದರು.

ಈ ವೇಳೆ ಸ್ಪಂದನೆ ನೀಡಿದ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಪ್ರಸಕ್ತ ರಾಜ್ಯದಲ್ಲಿ ಕೆಲಸ ನಿರ್ವಹಿಸಲು ಕಳೆದ ನಾಲ್ಕು ದಿನಗಳಿಂದ ಮೈಸೂರಿನಲ್ಲಿ ತಾತ್ಕಾಲಿಕ ಸಿಬ್ಬಂದಿಯ ನೇಮಕ ಪ್ರಕ್ರಿಯೆ ನಡೆಸುತ್ತಿರುವದಾಗಿ ಮಾಹಿತಿ ನೀಡಿದರು.

ಅಲ್ಲದೆ, ಕೊಡಗು ಜಿಲ್ಲೆಗೆ ಬರಲು ಇಚ್ಚೆ ಪಟ್ಟರೆ ನೇಮಕಾತಿ ಸಿಬ್ಬಂದಿಯಲ್ಲಿ 300 ಮಂದಿಯನ್ನು ನೇಮಕ ಗೊಳಿಸುವ ಮೂಲಕ ಕೊಡಗಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಕೈಗೊಳ್ಳುವದಾಗಿ

(ಮೊದಲ ಪುಟದಿಂದ) ಮೌಖಿಕ ಭರವಸೆ ನೀಡಿದರು.

ಈ ವೇಳೆ ಶಾಸಕರು ಚೆಸ್ಕಾಂ ನೌಕರರೊಂದಿಗೆ ಕೊಡಗಿಗೆ ತುರ್ತು ಅವಶ್ಯಕತೆಯಿರುವ ಸಾಮಗ್ರಿಗಳನ್ನು ಒದಗಿಸುವಂತೆಯೂ ಬೇಡಿಕೆ ಮುಂದಿಟ್ಟರು. ಆ ನಿಟ್ಟಿನಲ್ಲಿ ಪ್ರತಿಕ್ರಿಯಿಸಿದ ಕಿರಣ್‍ಕುಮಾರ್ ವಿದ್ಯುತ್ ಕಾಮಗಾರಿಗೆ ಸಾಮಗ್ರಿ ಕೊರತೆಯಾಗದಂತೆ ಕೊಡಗಿನ ಅಗತ್ಯಕ್ಕೆ ಅನುಸಾರ ಪೂರೈಸಲಾಗುವದು ಎಂದರು.

ಅಧಿಕಾರಿಗಳಿಗೆ ಕಿವಿಮಾತು : ನಿನ್ನೆಯ ಅಲ್ಪ ಮಳೆ-ಗಾಳಿಯಿಂದ ಮಡಿಕೇರಿ ನಗರದಲ್ಲೇ ಮರಬಿದ್ದು, ಸಮಸ್ಯೆ ಎದುರಾಗಿರುವ ಕುರಿತು ಪ್ರಸ್ತಾಪಿಸಿದ ಶಾಸಕರು ಜಿಲ್ಲೆಯ ಎಲ್ಲೆಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆಯಿರುವ ಮರದ ರೆಂಬೆ ಕೊಂಬೆಗಳು ಅಪಾಯ ತಂದೊಡ್ಡಲಿವೆಯೇ ಎಂಬ ಬಗ್ಗೆ ಈಗಿನಿಂದಲೇ ಪರಿಶೀಲಿಸಿ ತೆರವುಗೊಳಿಸಲು ಕಿವಿಮಾತು ಹೇಳಿದರು.

ಮಳೆ ಜೋರಾದ ಬಳಿಕ ಸಿಬ್ಬಂದಿ ಕೊರತೆ ನೆಪದಲ್ಲಿ ಪರದಾಡುವ ಬದಲು ಈಗಿನಿಂದಲೇ ಪೂರ್ವತಯಾರಿ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ ರಂಜನ್ ಅಗತ್ಯವಿದ್ದಾಗ ನಮ್ಮಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸಲು ಪ್ರಯತ್ನಿಸಿದರೆ, ಜನಪ್ರತಿನಿಧಿಗಳು ಸರಕಾರ ಹಾಗೂ ಮೇಲಧಿಕಾರಿಗಳ ಗಮನ ಸೆಳೆಯುವದಾಗಿ ಆಶ್ವಾಸನೆ ನೀಡಿದರು.

ಜಾಗ ಬೇಡಿಕೆ : ಸಂಪಾಜೆ ಹಾಗೂ ಭಾಗಮಂಡಲದಲ್ಲಿ ಕಾರ್ಯನಿರ್ವಹಿಸಲು ಚೆಸ್ಕಾಂ ಇಲಾಖೆಗೆ ಜಾಗದ ಅವಶ್ಯಕತೆ ಇದೆಯೆಂದು ಅಧಿಕಾರಿಗಳು ಪ್ರಸ್ತಾಪಿಸಿದಾಗ ಈ ಬಗ್ಗೆ ಆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜನಪ್ರತಿನಿಧಿಗಳ ಒಡಗೂಡಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಸ್ಥಳೀಯ ಆಡಳಿತದಿಂದ ಜಾಗ ಗುರುತಿಸಿ ಜಿಲ್ಲಾಡಳಿತದಿಂದ ಮಂಜೂರಾತಿಗೆ ಪ್ರಯತ್ನಿಸಲಾಗುವದು ಎಂದರು.

ಜಿಲ್ಲಾ ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅನುಪಸ್ಥಿತಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ನೀಲಶೆಟ್ಟಿ ಹಾಗೂ ದೊಡ್ಡಮನಿ ಮತ್ತಿತರ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.