ಮಡಿಕೇರಿ, ಏ. 28: ‘ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ’ ಎಂಬ ಗಾದೆ ಮಾತೊಂದು ಪುರಾತನ ಕಾಲದಿಂದ ಕೇಳಿ ಬಂದದ್ದು ಒಂದು ಮನೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ಒಮ್ಮೆ ವಿವಾಹ ಮಾಡಿಕೊಟ್ಟರೆ ಆ ಮನೆಯವರ ಜವಾಬ್ದಾರಿ ಮುಗಿದಂತೆ ಎಂದರ್ಥ... ಮದುವೆಯಾಗಿ ಹೋದ ಆ ಹೆಣ್ಣುಮಗಳಿಗೆ ನಂತರದ ದಿನಗಳಲ್ಲಿ ತವರಿನ ಆಶ್ರಯ ಸಿಗುವದು, ವಿಶೇಷ ಗೌರವ ಸಿಗುವದು ಅಪರೂಪ... ಇದು ಒಂದೆಡೆಯಾದರೆ ದಿವಂಗತ ವಿಷ್ಣುವರ್ಧನ್ ಅಭಿನಯದ ಚಲನ ಚಿತ್ರವೊಂದರಲ್ಲಿ ‘ಹಾಲುಂಡ ತವರನ್ನು ಮರಿಬೇಡ ಮಗಳೇ...’ ಎಂಬ ಹಾಡೊಂದು ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎಂಬ ಮಾತಿಗೆ ವಿಭಿನ್ನವಾಗಿದೆ. ಇದು ಒತ್ತಟ್ಟಿಗಿರಲಿ...
ಕೊಡಗಿನಲ್ಲಿ ಕೊಡವ ಕುಟುಂಬ ದಲ್ಲಿ ತವರು ಮನೆ ಹುಡುಗಿಯರಿಗೆ (ತಾಮನೆ ಮೂಡಿಯ) ವಿಶೇಷ ಗೌರವ ಮಾತ್ರವಲ್ಲ, ಸ್ಥಾನಮಾನವೂ, ಪ್ರೀತಿ ವಾತ್ಸಲ್ಯ ತೋರುವದು ಆಕೆ ಜನಿಸಿದ ಮನೆಯಲ್ಲಿ ಮಾತ್ರವಲ್ಲ... ಇಡೀ ಕುಟುಂಬದಿಂದಲೇ ಸಿಗುವದು ವಿಶೇಷತೆ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಇದು ಹಿಂದಿನಂತಿಲ್ಲ, ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ ಎಂಬ ನೋವು ಕೆಲವರಲ್ಲಿದೆ. ಸುಖ ಸಂತೋಷದ ಕಾರ್ಯಕ್ರಮಕ್ಕೆ ತವರುಮನೆ ಹುಡುಗಿಯರನ್ನು ಕೆಲವೊಂದು ಕುಟುಂಬಗಳಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಅಂತರಾಳದ ನೋವು ಕೆಲವರಲ್ಲಿದ್ದರೆ, ಇನ್ನು ಕೆಲವು ತವರು ಮನೆ ಹುಡುಗಿಯರು ತವರು ಮನೆಯನ್ನು (ಕುಟುಂಬವನ್ನು) ನಿರ್ಲಕ್ಷಿಸುತ್ತಿದ್ದಾರೆ ಎಂಬ ಮಾತೂ ಹಲವರಲ್ಲಿದೆ.
ಈ ಸನ್ನಿವೇಶದಲ್ಲಿ ಮಡಿಕೇರಿ ಸನಿಹದ ಬೆಟ್ಟತ್ತೂರಿನ ಕೂಪದಿರ ಕುಟುಂಬಸ್ಥರು ವಿಶೇಷತೆಯೊಂದನ್ನು ಮೆರೆದಿದ್ದಾರೆ. ಇತ್ತೀಚೆಗೆ ಕುಟುಂಬದಲ್ಲಿ ಗುರು ಕಾರೋಣರ ಸ್ಮರಣೆಯ ವಾರ್ಷಿಕ ಆಚರಣೆ ಹಾಗೂ ಯಕ್ಷಿಣಿ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಕುಟುಂಬದವರೊಂದಿಗೆ ಎಲ್ಲಾ ತವರುಮನೆ ಹುಡುಗಿಯರನ್ನು ಸಂಸಾರ ಸಮೇತವಾಗಿ ಆಹ್ವಾನಿಸಲಾಗಿತ್ತು.
ಕೂಪದಿರ ಕುಟುಂಬದಲ್ಲಿ ಸುಮಾರು 60 ತವರು ಮನೆ ಹುಡುಗಿಯರಿದ್ದು ಇವರು ಇಲ್ಲಿಂದ ಇತರ 60 ಕುಟುಂಬಗಳಿಗೆ ಮದುವೆಯಾಗಿ ಹೋಗಿದ್ದಾರೆ. ಇವರ ಹೆಣ್ಣು ಮಕ್ಕಳು ಆ ಕುಟುಂಬದಿಂದ ಬೇರೆ ಕುಟುಂಬಕ್ಕೆ ಮದುವೆಯಾಗಿರು ವದೂ ಇದೆ. ಇವರೆಲ್ಲರೂ ತಮ್ಮ ಸಂಸಾರದೊಂದಿಗೆ ಈ ಕಾರ್ಯ ಕ್ರಮದಲ್ಲಿ ಭಾಗಿಗಳಾಗಿದ್ದರು.
ಕುಟುಂಬದ ಐನ್ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಕೂಪದಿರ ಕುಟುಂಬದವರು ತವರು ಮನೆ ಹುಡುಗಿಯರು ಹಾಗೂ ನೆಂಟರನ್ನು ಕಾದು ಸ್ವಾಗತಿಸಿದರು. ಬಳಿಕ ತಳಿಯ ತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್ನೊಂದಿಗೆ ಸಾಂಪ್ರದಾಯಿಕ ಧಿರಿಸಿನೊಂದಿಗೆ ಎಲ್ಲರನ್ನೂ ಐನ್ಮನೆಗೆ ಕರೆ ತರಲಾಯಿತು. ಐನ್ಮನೆಯಲ್ಲಿ ಕೂಪದಿರ ಕುಟುಂಬಕ್ಕೆ ಮದುವೆ ಯಾಗಿ ಬಂದಿರುವ ಹೆಣ್ಣು ಮಕ್ಕಳು ಬಂದವರಿಗೆ ಸಂಪ್ರದಾಯದಂತೆ ಕಾಲು ತೊಳೆಯಲು ನೀರು, ಟವಲ್ ನೀಡಿ ‘ಬಂದಿರಾ... ಚಾಯಿತೆ ಉಳ್ಳಿರಾ’ ಎಂಬ ಸ್ವಾಗತದೊಂದಿಗೆ ಬರಮಾಡಿ ಕೊಂಡರು.
ನಂತರ ಗುರುಕಾರೋಣರ ಪ್ರಾರ್ಥನೆಯೊಂದಿಗೆ ಅಕ್ಕಿ ಹಾಕಿ ಕಾರ್ಯಕ್ರಮ ಆರಂಭಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮ, ಸಭಾಕಾರ್ಯಕ್ರಮದ ಸಂಭ್ರಮದ ಮೂಲಕ ಈ ಕಾರ್ಯಕ್ರಮ ಒಂದು ರೀತಿಯಲ್ಲಿ ‘ಸ್ಪೆಷಲ್’ ಆಗಿ ಮೂಡಿ ಬಂದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಕೂಪದಿರ ಎಂ. ಮುತ್ತು ಮುತ್ತಪ್ಪ, ರಾಜಾ ನಂಜಪ್ಪ, ಕೆ.ಎಂ. ಮೊಣ್ಣಪ್ಪ, ಸುಂದರಿ ಮಾಚಯ್ಯ, ಭವಾನಿ ಸುಬ್ಬಯ್ಯ, ವಿಜಯ, ಬೊಳ್ಳಿಯಂಡ ನಾಣಯ್ಯ, ಬಿಜ್ಜಂಡ ದೇವಕಿ ಮತ್ತಿತರರು ಹಾಜರಿದ್ದರು.
-ಕಾಯಪಂಡ ಶಶಿ