ಮಡಿಕೇರಿ, ಏ.27: ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿ ಕುಟುಂಬಗಳಿಗೆ ಈಗಾಗಲೇ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ-ಮದಲಾಪುರದಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನದಾರರಿಗೆ ಒಂದು ವಾರದೊಳಗೆ ಹಕ್ಕುಪತ್ರ ವಿತರಿಸಲು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಗೊಂಡಿದೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಿಡ್ಡಳ್ಳಿ ಪುನರ್ ವಸತಿ ಸಮಿತಿ ಸಭೆಯಲ್ಲಿ ನಿರಾಶ್ರಿತ ಆದಿವಾಸಿಗಳ ಅಭಿಪ್ರಾಯ ಪಡೆದು ವಾರದಲ್ಲಿ ನಿವೇಶನ ಹಕ್ಕುಪತ್ರ ವಿತರಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಇಂಗಿತ ಹೊರಗೆಡವಿದ್ದಾರೆ. ಸಭೆಯ ಆರಂಭದಲ್ಲಿ ಮಾತನಾಡಿದ ನಿರಾಶ್ರಿತರ ಹೋರಾಟ ಸಮಿತಿ ಸದಸ್ಯ ಸ್ವಾಮಿ, ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ- ಮದಲಾಪುರಕ್ಕೆ ನಿರಾಶ್ರಿತರು

(ಮೊದಲ ಪುಟದಿಂದ) ತೆರಳಲು ಸಿದ್ಧ್ದ. ಆದರೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರಿನಲ್ಲಿ ಗುರುತಿಸಲಾಗಿರುವ ಜಾಗ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೊಬ್ಬ ಸಮಿತಿ ಸದಸ್ಯೆ ಅನಿತಾ ದಿಡ್ಡಳ್ಳಿಯಲ್ಲಿಯೇ ಜಾಗ ನೀಡಿ ಎಂದು ನಿರಾಶ್ರಿತರು ಕೇಳುವದಿಲ್ಲ. ಎಲ್ಲರಿಗೂ ಒಂದೇ ಕಡೆ ನಿವೇಶನ ನೀಡಿದರೆ ಒಳ್ಳೆಯದು ಎಂಬದು ನಿರಾಶ್ರಿತರ ಭಾವನೆಯಾಗಿದೆ. ಆದರೆ ಕೆದಮುಳ್ಳೂರು ಗ್ರಾಮದಲ್ಲಿ ಗುರ್ತಿಸಿರುವ ಜಾಗ ಮಾತ್ರ ಬೇಡ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿ ದರು.ಆದರೂ ಸಹ ಸಮಿತಿ ಸಭೆಯಲ್ಲಿ ನಡೆದ ನಿರ್ಧಾರವನ್ನು ದಿಡ್ಡಳ್ಳಿಯ ನಿರಾಶ್ರಿತ ಗಿರಿಜನರಿಗೆ ಮಾಹಿತಿ ನೀಡಲಾಗುವದು ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ದಿಡ್ಡಳ್ಳಿ ನಿರಾಶ್ರಿತ ಗಿರಿಜನರಿಗೆ ಮೂಲ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವದು. ಅದಕ್ಕಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ನಿವೇಶನ ಹಕ್ಕುಪತ್ರ ಪಡೆದ ನಂತರ ಮನೆ ನಿರ್ಮಾಣ, ಯುವಜನರು ಸ್ವ ಉದ್ಯೋಗ ಕೈಗೊಳ್ಳಲು ಕೌಶಲ್ಯ ತರಬೇತಿ ಹಾಗೂ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ಕೊಡಿಸಿ ಉದ್ಯೋಗ ಕಲ್ಪಿಸಲಾಗುವದು. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾಮಗಳಲ್ಲಿ ಗುರುತಿಸ ಲಾಗಿರುವ ಜಾಗದಲ್ಲಿ ಹೆಚ್ಚುವರಿ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಕ್ಕುಪತ್ರ ನೀಡುವದಕ್ಕೂ ಮೊದಲು ನಿವೇಶನದಾರರ ಭಾವಚಿತ್ರವನ್ನು ತೆಗೆಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಐಟಿಡಿಪಿ ಅಧಿಕಾರಿಗೆ ಡಾ. ಡಿಸೋಜ ಸೂಚನೆ ನೀಡಿದರು.

ಆಹಾರ: ಅಕ್ಕಿ ವಿತರಣೆ ಮುಂದುವರಿಸುವಂತೆ ಕೋರಿ ಕೊಂಡಿರುವ ಹಿನ್ನೆಲೆ ಈ ಸಂಬಂಧ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕೆದಮುಳ್ಳೂರು ಗ್ರಾಮದಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನದಾರರಿಗೆ ಆ ಜಾಗ ಬೇಡದಿದ್ದಲ್ಲಿ ಪರ್ಯಾಯ ಜಾಗ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವದು. ಅದಕ್ಕಾಗಿ ಕಾಲಾವಕಾಶಬೇಕಿದೆ ಎಂದು ಜಿಲ್ಲಾಧಿಕಾರಿ ಮಾರ್ನುಡಿದರು.

ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್ ಫೋಟೋ ತೆಗೆಸಲು ಅಗತ್ಯ ವ್ಯವಸ್ಥೆ ಮಾಡಲಾಗುವದು. ಈಗಾಗಲೇ ಬಸವನಹಳ್ಳಿಯಲ್ಲಿ 181, ಬ್ಯಾಡಗೊಟ್ಟದಲ್ಲಿ 171 ಮತ್ತು ಕೆದಮುಳ್ಳೂರು ಗ್ರಾಮದಲ್ಲಿ 176 ಕುಟುಂಬಗಳಿಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದೆ. ಕುಡಿಯುವ ನೀರು ಮತ್ತು ವಿದ್ಯುದ್ದೀಕರಣ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಹಕ್ಕುಪತ್ರ ವಿತರಣೆ ನಂತರ ನಿರಾಶ್ರಿತ ಶೆಡ್ಡು ನಿರ್ಮಾಣ ಮಾಡಿಕೊಂಡ ಬಳಿಕ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮನೆ ನಿರ್ಮಿಸಿ ಕೊಡಲು ವ್ಯವಸ್ಥೆ ಮಾಡಲಾಗುವದು ಎಂದು ಸಭೆಗೆ ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಮಾತನಾಡಿ ಐಟಿಡಿಪಿ ಇಲಾಖೆ ಮೂಲಕವೇ ಫೋಟೋ ತೆಗೆಸುವದು ಮತ್ತು ಜಾಬ್ ಕಾರ್ಡ್ ಕೊಡಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಸಲಹೆ ಮಾಡಿದರು.

ಜಿ.ಪಂ.ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ ದಿಡ್ಡಳ್ಳಿ ಜನರಿಗೆ ಹಕ್ಕು ಪತ್ರ ವಿತರಣೆ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಸಮಿತಿ ಸದಸ್ಯ ಸುಬ್ರಮಣಿ, ಐಟಿಡಿಪಿ ಇಲಾಖೆ ವೀರಾಜಪೇಟೆ ತಾಲೂಕು ಅಧಿಕಾರಿ ಚಂದ್ರಶೇಖರ್, ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ ಸಚಿನ್, ಕೆಆರ್‍ಡಿಎಲ್ ಸಹಾಯಕ ಎಂಜಿನಿಯರ್ ಪ್ರಮೋದ್ ಇತರರು ಇದ್ದರು.