ವೀರಾಜಪೇಟೆ, ಏ. 28: ತಿತಿಮತಿ ಬಳಿಯ ಆನೆಚೌಕೂರು ವನ್ಯ ಜೀವಿ ವಲಯದ ಜಂಗಲ್ ಹಾಡಿಯಲ್ಲಿ ಜೇನು ಕುರುಬರ 52 ಕುಟುಂಬಗಳು ಭಯ ಭೀತಿಯಲ್ಲಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದು ಈ ಕುಟುಂಬಗಳನ್ನು 30 ದಿನಗಳೊಳಗೆ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸದಿದ್ದರೆ ಹುಣಸೂರು ವಿಭಾಗೀಯ ಅರಣ್ಯ ಕಚೇರಿ ಮುಂದೆ ಧರಣಿ ಮುಷ್ಕರ ಹೂಡುವದಾಗಿ ಹಾಡಿಯ ಪ್ರಮುಖ ಜೆ.ಆರ್.ಸುರೇಶ್ ತಿಳಿಸಿದ್ದಾರೆ.
ಜಂಗಲ್‍ಹಾಡಿಯ ಜೇನು ಕುರುಬರ ಕುಟುಂಬಗಳ ಪರವಾಗಿ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 69ವರ್ಷಗಳು ಕಳೆದಿದ್ದರೂ ಈ ಹಾಡಿಯಲ್ಲಿ ಕಡು ಬಡತನ, ದಾರಿದ್ರ್ಯತೆ ಇಂದಿಗೂ ಮುಂದುವರೆದಿದೆ. ಹಾಡಿಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ದುಸ್ತರ ಜೀವನ ನಡೆಸಬೇಕಾಗಿದೆ.
ಗುಡಿಸಲಿನ ಸುತ್ತ ಮುತ್ತಲು ಕಾಡಾನೆ, ಕರಡಿ, ಕಾಡೆಮ್ಮೆ, ಹುಲಿ ಸೇರಿದಂತೆ ಇತರ ಪ್ರಾಣಿಗಳು ಹಾಡಿ ನಿವಾಸಿಗಳಿಗೆ ರಾತ್ರಿ ಹಗಲು ಎನ್ನದೆ ಕಾಣಿಸಿಕೊಳ್ಳುತ್ತಿರುತ್ತವೆ. ಇಲಾಖೆಗೆ ದೂರು ನೀಡಿದರೂ ಯಾವದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.
ಜಂಗಲ್ ಹಾಡಿಯ ಜೆ.ಆರ್. ಗಣೇಶ್ ಮಾತನಾಡಿ, ಕೇಂದ್ರ ಸರಕಾರದ ಗಿರಿಜನ ಪುನರ್ ವಸತಿಯೋಜನೆಯಡಿಯಲ್ಲಿ ಹೆಚ್.ಡಿ. ಕೋಟೆ ತಾಲೂಕಿನ ಮಾಸ್ತಿಗುಡಿ ಎಂಬ ಅರಣ್ಯ ಪ್ರದೇಶದಲ್ಲಿ ಇದೇ ಹಾಡಿಯ ನಿವಾಸಿಗಳಿಗೆ
210 ಪುನರ್ವಸತಿ ಮನೆಗಳನ್ನು ನಿರ್ಮಿಸುತ್ತಿದ್ದು ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಅಧಿಕಾರಿಗಳ ಅಸಡ್ಡೆಯಿಂದಾಗಿ ಪುನರ್ವಸತಿ ಕೇಂದ್ರದ ಮೂಲ ಸೌಲಭ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರಿಗೆ ಅಧಿಕಾರಿಗಳು ಒತ್ತಡ ಹೇರಿದರೆ ಮುಂದಿನ 20 ದಿನಗಳಲ್ಲಿ ಕೇಂದ್ರದ ಎಲ್ಲ ಕೆಲಸಗಳು ಮುಕ್ತಾಯವಾಗಿ ಜಂಗಲ್ ಹಾಡಿಯ 52 ಕುಟುಂಬಗಳನ್ನು ಸ್ಥಳಾಂತರಿಸಬಹುದು. ಹಾಡಿಯ ಕುಟುಂಬಗಳು ಸ್ಥಳಾಂತರಗೊಳ್ಳಲು ಸ್ವಇಚ್ಛೆ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮನವಿಯನ್ನು ನೀಡಿದರೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ವಿಳಂಬವಾಗುತ್ತಿದೆ ಎಂದು ದೂರಿದರು.
ಹಾಡಿಯ ಜೆ.ಕೆ. ಅಯ್ಯಪ್ಪ ಮಾತನಾಡಿ ಜಂಗಲ್ ಹಾಡಿಯ ಕುಟುಂಬಗಳನ್ನು ಜೂನ್ ತಿಂಗಳ ನಂತರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ.
ಕೇಂದ್ರ ಸರಕಾರದ ಈ ಯೋಜನೆಯಡಿಯಲ್ಲಿ 15 ಲಕ್ಷ ಪ್ಯಾಕೇಜಿನ 3 ಎಕರೆ ಕೃಷಿ ಜಮೀನು, ನಿಗದಿತ ಅಳತೆಯ ನಿವೇಶನ, ರೂ 3 ಲಕ್ಷ ನಿಶ್ಚಿತ ಠೇವಣಿ, ರೂ. 50,000 ನಗದು ಸೇರಿದಂತೆ ಇತರ ಮೂಲ ಸೌಲಭ್ಯಗಳು ದೊರೆಯಲಿವೆ ಇದರಿಂದ ಜೇನು ಕುರುಬರ ಜೀವನವೂ ಸುಧಾರಣೆ ಯಾಗಲಿದೆ ಎಂದು ಹೇಳಿದರು.
ಜಂಗಲ್ ಹಾಡಿಯ ಜೆ.ಕೆ. ಬೋಜ ಮಾತನಾಡಿ ಹಾಡಿಯ ನಿವಾಸಿಗಳಿಗಾಗಿ ಕುಡಿಯುವ ನೀರಿಗಾಗಿ ಜಲವಿರುವ ಹೊಂಡ ತೆಗೆಯಲಾಗಿದೆ.
ಹೊಂಡದಲ್ಲಿ ಹಗಲು ಪೂರ್ತಿ ನೀರು ತುಂಬಿದರೆ ಅದನ್ನು ರಾತ್ರಿ ಕಾಡು ಪ್ರಾಣಿಗಳು ಕುಡಿದು ಖಾಲಿ ಮಾಡುತ್ತಿರುವದರಿಂದ ಹಾಡಿಯ ನಿವಾಸಿಗಳು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಜೆ.ಕೆ. ಬೆಳ್ಳಿಯಪ್ಪ ಹಾಜರಿದ್ದರು. ಇದೇ ಸಂದರ್ಭ ಹಾಡಿಯ ಪ್ರಮುಖರು ತಾಲೂಕು ತಹಶೀಲ್ದಾರ್ ಕಚೇರಿಗೆ ತೆರಳಿ ಹಾಡಿಗಳ ಕುಟುಂಬಗಳನ್ನು ತುರ್ತು ಸ್ಥಳಾಂತರಕ್ಕೆ ಮನವಿ ಸಲ್ಲಿಸಿದರು.