ಕರಿಕೆ, ಏ. 28: ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿಮೂಲೆ ಎಂಬಲ್ಲಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ಕಾಮಗಾರಿ ಪೂರ್ಣಗೊಳಿಸದೆ ಇರುವ ಕೊಳವೆ ಬಾವಿಗಳೆರಡು ಅಪಾಯವನ್ನು ಆಹ್ವಾನಿಸುತ್ತಿವೆ.

ಜಿ.ಪಂ. ಯೋಜನೆಯಡಿ ಕಳೆದ 3-4 ವರ್ಷಗಳ ಹಿಂದೆ ಕಾಮಗಾರಿ ಮಂಜೂರಾಗಿತ್ತಾದರೂ ಇನ್ನೂ ಕೂಡ ಕಾಮಗಾರಿ ಪೂರ್ಣಗೊಳಿಸದೆ ಭಾಗಮಂಡಲ- ಕರಿಕೆ ಹೆದ್ದಾರಿ ಬದಿಯಲ್ಲೇ ಈ ಕೊಳವೆ ಬಾವಿ ತೆರೆದ ಸ್ಥಿತಿಯಲ್ಲಿವೆ. ಇದಕ್ಕೆ ಮೋಟಾರ್ ಅಳವಡಿಸಿರುವದಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಯವರನ್ನು ವಿಚಾರಿಸಿದರೆ ತಮ್ಮ ಪಂಚಾಯಿತಿಗೆ ಇನ್ನೂ ಕೂಡ ಈ ಕಾಮಗಾರಿಯನ್ನು ವರ್ಗಾಯಿಸಿರುವದಿಲ್ಲ. ಅಲ್ಲದೆ, ಕುಡಿಯುವ ನೀರಿನ ಕೊರತೆಯ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇರುವದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡುತ್ತಾರೆ. ಇದರ ಸಮೀಪವೇ ಸುಮಾರು 10 ಅಡಿ ದೂರದಲ್ಲಿ ಇನ್ನೆರಡು ಹಳೆಯ ಕೊಳವೆ ಬಾವಿ ಕೂಡ ಅಪಾಯದ ಸ್ಥಿತಿಯಲ್ಲಿದ್ದು, ಇದನ್ನು ಕೂಡ ಮುಚ್ಚಿರುವದಿಲ್ಲ. ಸಂಬಂಧಿಸಿದ ಇಲಾಖೆ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವದು ಒಳ್ಳೆಯದು ಎಂಬದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

-ಸುಧೀರ್