ಸೋಮವಾರಪೇಟೆ, ಏ.28: ತೋಳೂರುಶೆಟ್ಟಳ್ಳಿ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ಕೂತಿನಾಡಿಗೆ ಸೇರಿದ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು, ಇನಕನಹಳ್ಳಿ, ಸಿಂಗನಳ್ಳಿ, ಹರಪಳ್ಳಿ, ನಡ್ಲಕೊಪ್ಪ, ದೊಡ್ಡಮನೆಕೊಪ್ಪ, ಕಂಬಳ್ಳಿ, ಕೊಪ್ಪ, ಕರಡಿಕೊಪ್ಪ ಸೇರಿದಂತೆ ಸುತ್ತಮುತ್ತಲ 19 ಗ್ರಾಮಗಳ ಗ್ರಾಮಸ್ಥರು ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಧಿವಿಧಾನಗಳೊಂದಿಗೆ ನೆರವೇರಿತು.

ತೋಳೂರುಶೆಟ್ಟಳ್ಳಿ ಗ್ರಾಮದ ಸುಗ್ಗಿಬನದಲ್ಲಿ ನಿರ್ಮಿಸಿರುವ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಸುಗ್ಗಿ ಕಟ್ಟೆ ಎದುರು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕ ರ್ಯಗಳನ್ನು ನೆರವೇರಿಸಲಾಯಿತು.

ಪುಷ್ಪಗಿರಿ ಬೆಟ್ಟದಲ್ಲಿರುವ ಕುಮಾರಲಿಂಗೇಶ್ವರ ದೇವಾಲಯ ಹಾಗೂ ಮುಳ್ಳಯ್ಯನಗಿರಿಗೆ ತೆರಳಿ ಮಳೆ ಕರೆಯುವ ಪದ್ದತಿಯೊಂದಿಗೆ ಪ್ರಾರಂಭವಾದ ಸುಗ್ಗಿ ಉತ್ಸವದಲ್ಲಿ, ಬೀರೇದೇವರ ಹಬ್ಬ, ಗುಮ್ಮನ ಮರಿ ಪೂಜೆ, ಬಾವಿಗದ್ದೆ ಊಟ, ಊರೊಡೆಯನ ಪೂಜೆ, ಔತಣ, ಕೊಂಡ ಹಾಯುವದು, ಬೇಟೆ, ಊರು ಸುಗ್ಗಿ, ದೇವರ ಗಂಗಾ ಸ್ನಾನ, ಆವರಣ ಶೃಂಗಾರ, ನೆಂಟರ ಸುಗ್ಗಿ, ಹಗಲು ಸುಗ್ಗಿ, ಹೆದ್ದೇವರ ಸುಗ್ಗಿ ಸಂಭ್ರಮದಿಂದ ನಡೆಯಿತು. ತಾ. 29ರಂದು ಹೆದ್ದೇವರ ಬನಕ್ಕೆ ಹಾಲೆರೆಯುವ ಮೂಲಕ ಈ ವರ್ಷದ ಸುಗ್ಗಿಗೆ ವಿಧ್ಯುಕ್ತ ತೆರೆಬೀಳಲಿದೆ.