ಸೋಮವಾರಪೇಟೆ, ಏ.28: ತಾಲೂಕಿನ ಶಾಂತಳ್ಳಿ ಹೋಬಳಿಯ ಮಲ್ಲಳ್ಳಿ ಜಲಪಾತದ ಸಮೀಪ ವಾಸದ ಮನೆಯನ್ನು ಕಂದಾಯ ಇಲಾಖೆ ಕೆಡವಿ ಬಡ ರೈತನ ಮೇಲೆ ದೌರ್ಜನ್ಯವೆಸಗಿದೆ ಎಂದು ಸಂತ್ರಸ್ಥ ಕುಟುಂಬಸ್ಥರಾದ ಮಲ್ಲಪ್ಪ, ಯು.ಆರ್.ಕಾಳಪ್ಪ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಶ್ರೀಮಂತರ ಭೂಮಿಯನ್ನು ತೆರವು ಮಾಡುವ ಕ್ರಮಕ್ಕೆ ಮುಂದಾಗದೇ, ಸಂಕಷ್ಟದಲ್ಲಿರುವ ಬಡ ರೈತನ ಮನೆ ನೆಲಸಮ ಮಾಡಲು ಕಂದಾಯ ಇಲಾಖಾಧಿಕಾರಿಗಳು ಮುಂದಾಗಿರುವದು ಖಂಡನೀಯ ಎಂದು ಹೇಳಿದರು.

ಮಲ್ಲಳ್ಳಿ ಜಲಪಾತ ಸಮೀಪದಲ್ಲಿ ಹಕ್ಕುಪತ್ರ ಹೊಂದಿರುವ ಮೂರು ಎಕರೆ ಜಾಗವಿದ್ದು, ಆ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ. ಆದರೆ ಮನೆ ಕಟ್ಟಿರುವ ಜಾಗ ಸರ್ಕಾರಿ ಒತ್ತುವರಿ ಜಾಗ ಎಂಬ ಕಾರಣ ನೀಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಮನೆ ಕೆಡವಿದ್ದಾರೆ. ರಾಜಕೀಯ ಪ್ರಭಾವಿಗಳು ಆ ಸ್ಥಳದಲ್ಲಿ ಹೋಂ ಸ್ಟೇ ಮಾಡಲು ಕಂದಾಯ ಇಲಾಖೆಯ ಮೂಲಕ ಮನೆಯನ್ನು ಕೆಡವಿಸಿದ್ದಾರೆ ಎಂದು ಮಲ್ಲಪ್ಪ ದೂರಿದರು.

ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಪ್ರಕಾರ ಕಲಂ 94ರಡಿ ಕುಮಾರಳ್ಳಿ ಗ್ರಾಮದ ಸರ್ವೇ ನಂಬರ್ 1/9ರಲ್ಲಿ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಕಚೇರಿಯಿಂದ ನೋಟೀಸು ಜಾರಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಾದ ನಾವುಗಳು ಪಹಣಿ ಪತ್ರ, ಸಾಗುವಳಿ ಚೀಟಿ, ಹಕ್ಕು ಪತ್ರ, ಪಂಚಾಯಿತಿಗೆ ಕಂದಾಯ ಪಾವತಿ ಮಾಡಿರುವ ರಶೀದಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮಾ.21ರಂದು ತಹಶೀಲ್ದಾರ್ ಕಚೇರಿಗೆ ಸಲ್ಲಿಸಿದ್ದೆವು.

2003ರಲ್ಲಿಯೇ ನಾವು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದೇವೆ. ಆದರೆ ಏಪ್ರಿಲ್ 26ರ ಶಾಂತಳ್ಳಿ ಹೋಬಳಿಯ ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗ ಮತ್ತು ಇತರ ಸಿಬ್ಬಂದಿಗಳು ಪೊಲೀಸರ ಸಹಕಾರದೊಂದಿಗೆ ಜೆಸಿಬಿ ಮೂಲಕ ಮನೆಯನ್ನು ಕೆಡವಿದ್ದಾರೆ. ಮನೆಯೊಳಗಿದ್ದ ಎಲ್ಲಾ ಬೆಲೆಬಾಳುವ ಸಾಮಗ್ರಿಗಳು ನಷ್ಟಗೊಂಡಿವೆ. ಜಿಲ್ಲಾಡಳಿತ ಇದನ್ನು ಮನಗಂಡು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಲ್ಲಳ್ಳಿ ಜಲಪಾತದ ಸುತ್ತಮುತ್ತಲೂ ಜಾಗವನ್ನು ಖರೀದಿಸುವ ಉದ್ದೇಶದಿಂದ ಕೆಲವು ಪ್ರಭಾವಿಗಳು ತಾಲೂಕು ಆಡಳಿತದ ಮೇಲೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಅದ್ದರಿಂದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದು ಗ್ರಾಮಸ್ಥ ಸತೀಶ್ ದೂರಿದರು. ಗೋಷ್ಠಿಯಲ್ಲಿ ಕುಮಾರಳ್ಳಿ ಗ್ರಾಮಸ್ಥರಾದ ಸುದೀಪ್, ದಿಲೀಪ್ ಉಪಸ್ಥಿತರಿದ್ದರು.