ಮಡಿಕೇರಿ, ಏ. 30: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜನಾಂಗ ಬಾಂಧವರ ನಡುವಿನ ಪೈಕೇರ ಕಪ್ ಕ್ರಿಕೆಟ್ ಉತ್ಸವದಲ್ಲಿ ಇಂದು ಕಬಡ್ಡಿ ಹಾಗೂ ಥ್ರೋಬಾಲ್ ನಡೆಯಿತು.ಇದೇ ಮೊದಲ ಬಾರಿಗೆ ಮಹಿಳೆ ಯರಿಗಾಗಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾಟ ಕ್ರಿಕೆಟ್ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. 32 ಪುರುಷರ ತಂಡ, 8 ಮಹಿಳೆಯರ ತಂಡಗಳು ಕಬಡ್ಡಿಯಲ್ಲಿ ಪಾಲ್ಗೊಂಡಿದ್ದವು. ಎಲ್ಲೆಡೆ ಬಹುತೇಕ ಪುರುಷರಿಗಾಗಿ ಮಾತ್ರ ಕಬಡ್ಡಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಆದರೆ ಪೈಕೇರ ಕ್ರಿಕೆಟ್ ಹಬ್ಬದಲ್ಲಿ ಮಹಿಳೆಯರಿಗೆ ವಿಶೇಷವಾಗಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದರಿಂದ ಮಹಿಳೆಯರು ಕೂಡ ‘ತಾವೇನು ಕಮ್ಮಿಯಿಲ್ಲ' ಎಂಬಂತೆ ಮೈದಾನದಲ್ಲಿ ‘ಕಬಡ್ಡಿ ಕಬಡ್ಡಿ' ಎನ್ನುತ್ತಾ ಪೈಪೋಟಿಯಲ್ಲಿ ತೊಡಗಿದ್ದರು. ಕಬಡ್ಡಿ ಪಂದ್ಯವನ್ನು ಪೈಕೇರ ಕುಟುಂಬದ ಪಟ್ಟೆದಾರರಾದ ನಂಜುಂಡ ಅವರು ಸಂಪ್ರದಾಯದಂತೆ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹೊಸೊಕ್ಲು ಎಸ್. ಉತ್ತಪ್ಪ, ಕಾರ್ಯದರ್ಶಿ ದುಗ್ಗಳ ಕಪಿಲ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮಹಿಳೆಯರಿಗಾಗಿ ಏರ್ಪಡಿಸ ಲಾಗಿದ್ದ ಥ್ರೋಬಾಲ್ ಪಂದ್ಯವನ್ನು ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯೆ ತುಂತಜೆ ಕುಮುದಾ ರಶ್ಮಿ ಉದ್ಘಾಟಿಸಿದರು. ಸುಮಾರು 16 ತಂಡಗಳು ಥ್ರೋಬಾಲ್‍ನಲ್ಲಿ ಪಾಲ್ಗೊಂಡಿದ್ದವು. ಕಬಡ್ಡಿ ಹಾಗೂ ಥ್ರೋಬಾಲ್ ಎರಡು ಪಂದ್ಯಾಟಗಳು ಕೂಡ ನೋಡುಗರನ್ನು ರಂಜಿಸಿದವು. ಮೈದಾನದ ತುಂಬಾ ಕ್ರೀಡಾಭಿಮಾನಿ ಗಳು ಜಮಾಯಿಸಿ ಕ್ರೀಡಾಪಟುಗಳಿಗೆ ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು.

ಬೈನೆರವನ ಹಾಗೂ ಕಟ್ಟೆಮನೆ ತಂಡದ ನಡುವೆ ನಡೆದ ಥ್ರೋಬಾಲ್ ಫೈನಲ್ ಪಂದ್ಯದಲ್ಲಿ ಕಟ್ಟೆಮನೆ ತಂಡ ಬೈನೆರವನ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸೆಮಿಫೈನಲ್‍ನಲ್ಲಿ ಕಟ್ಟೆಮನೆ ತಂಡ ಬೈಮನ ತಂಡವನ್ನು ಮಣಿಸಿತು. ಬೈನೆರವನ ತಂಡ ಬಾಡನ ತಂಡವನ್ನು ಸೋಲಿಸಿತು.

ಕಬಡ್ಡಿ ಸೆಮಿಫೈನಲ್‍ನಲ್ಲಿ ಎಫ್‍ಎಂಸಿ ತಂಡ (7), ಹೊಸೋಕ್ಲು (34) ತಂಡದ ವಿರುದ್ಧ ಸೋಲು ಕಂಡಿತು. ಗೋಪಾಲಕೃಷ್ಣ ಯುವ ಸಂಘ (15), ಕೂರ್ಗ್‍ಕ್ವೀನ್ಸ್ (20) ತಂಡದ ವಿರುದ್ಧ ಸೋಲನುಭವಿಸಿತು.

ಹೊಸೋಕ್ಲು ಹಾಗೂ ಕೂರ್ಗ್‍ಕ್ವೀನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಹೊಸೋಕ್ಲು ತಂಡ (32), ಕೂರ್ಗ್‍ಕ್ವೀನ್ಸ್ (2) ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿತು.