ಮಡಿಕೇರಿ, ಏ.30: ಎಸ್‍ಡಿಪಿಐ ಪಕ್ಷದ ವತಿಯಿಂದ ದೇಶಾದ್ಯಂತ ನಡೆಯುತ್ತಿರುವ ಭಯೋತ್ಪಾದನಾ ರಾಜಕೀಯದ ವಿರುದ್ಧ ಒಂದಾಗೋಣ ಅಭಿಯಾನದ ಅಂಗವಾಗಿ ಜಿಲ್ಲೆಯ ಅಯ್ಯಂಗೇರಿಯಲ್ಲಿ ಸಾರ್ವಜನಿಕ ಸಭೆ ನಡೆಯಿತು.ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ದೇಶದಲ್ಲಿ ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದ್ದು, ಗೋವಿನ ಪ್ರಾಣಕ್ಕೆ ಶ್ರೇಷ್ಠತೆ ನೀಡುತ್ತಿರುವದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸಂವಿಧಾನವನ್ನು ತಿರಸ್ಕರಿಸಿ ಮಾನವನ ಮೇಲೆ ನಡೆಯುತ್ತಿರುವ ಅಕ್ರಮಗಳು ಕೂಡ ಭಯೋತ್ಪಾದನಾ ಕೃತ್ಯವಾಗಿದೆ ಎಂದರು.ರಾಜ್ಯ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಹಲವು ಆರೋಪಗಳನ್ನು ಎದುರಿಸುತ್ತಿರುವ ಹಾಗೂ ವಿವಿಧ ಕ್ರಿಮಿನಲ್ ಕೇಸುಗಳು ಇರುವವರು ಆಡಳಿತ ನಡೆಸುತ್ತಿರುವದರಿಂದ ದೇಶದ ವಿವಿಧ ಭಾಗಗಳಲ್ಲಿ ಅಮಾಯಕರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ ಎಂದರು.

ಈ ಸಂದರ್ಭ ಪಕ್ಷದ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕೇರಳ ರಾಜ್ಯದ ಜಲೀಲ್, ಅಬ್ದು ಸಲಾಂ, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಕತ್ ಅಲಿ, ಮಡಿಕೇರಿ ನಗರಸಭಾ ಸದಸ್ಯರಾದ ಪೀಟರ್, ಮನ್ಸೂರ್, ಅಯ್ಯಂಗೇರಿ ಘಟಕದ ಅಧ್ಯಕ್ಷ ಉಸ್ಮಾನ್, ಪ್ರಮುಖರಾದ ಮೊಣ್ಣಪ್ಪ, ಹ್ಯಾರೀಸ್, ಶೌಕತ್ ಅಲಿ, ಇಬ್ರಾಹಿಂ ಸೇರಿದಂತೆ ಮತ್ತಿತರರು ಇದ್ದರು.