ಗೋಣಿಕೊಪ್ಪಲು, ಮೇ 3: ಅಳಮೇಂಗಡ ಕ್ರಿಕೆಟ್ ಕಪ್‍ನ 10 ನೇ ದಿನದ ಟೂರ್ನಿಯಲ್ಲಿ ತಾತೀರ ತಂಡವು 8 ಆಟಗಾರರೊಂದಿಗೆ ಆಟವಾಡಿ ಗೆಲುವು ದಾಖಲಿಸುವ ಮೂಲಕ ದಾಖಲೆ ನಿರ್ಮಿಸಿತು.

ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಕಳ್ಳಿಚಂಡ ವಿರುದ್ಧ ತಾತೀರ 5 ವಿಕೆಟ್ ಗೆಲುವು ದಾಖಲಿಸಿತು.

ಕಳ್ಳಿಚಂಡ 4 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿತು. ತಾತೀರ 3 ವಿಕೆಟ್ ಕಳೆದುಕೊಂಡು 6.3 ಓವರ್‍ಗಳಲಿ 74 ರನ್ ಗಳಿಸಿ ಗೆಲುವಿನ ನಗೆ ಬೀರಿತು. ತಾತೀತ ಸಜು 34 ರನ್ ಸಿಡಿಸಿದರು. ಕಳ್ಳಿಚಂಡ ವಿವೇಕ್ 26 ರನ್ ಬಾರಿಸಿ ಮಿಂಚಿದರು. ತಾತೀರ ತಂಡದ ಕ್ರೀಡಾ ಸ್ಫೂರ್ತಿಗೆ ಕ್ರೀಡಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಉಳಿದಂತೆ ಚೆಟ್ಟೀರ, ಕೊಟ್ಟಂಗಡ, ಕಲ್ಲೇಂಗಡ, ಬೊಳ್ಯಡ, ಕೋಟೃಮಾಡ, ಆಪಟ್ಟೀರ, ಮೂಕೊಂಡ, ಕೋಟ್ರಂಗಡ, ಕೆದಮುಳ್ಳೂರು ಮಾಳೇಟೀರ ಹಾಗೂ ಬಲ್ಲಂಡ ತಂಡಗಳು ಗೆಲುವಿನ ನಗೆ ಬೀರಿತು. ಯಾವದೇ ಪಂದ್ಯಗಳು ವಾಕ್‍ಓವರ್ ಪಡೆದುಕೊಳ್ಳದೆ ಹಾಗೂ ಮಳೆಯ ಅಡ್ಡಿಯಾಗದೆ ನಡೆದಿರುವದು ವಿಶೇಷವಾಗಿದೆ.

ಚೆಟ್ಟೀರ ವಿರುದ್ಧ ಬಿದ್ದಾಟಂಡಕ್ಕೆ 65 ರನ್‍ಗಳಿಂದ ಸೋಲುಂಟಾಯಿತು. ಚೆಟ್ಟೀರ 6 ವಿಕೆಟ್‍ಗೆ 99 ರನ್ ದಾಖಲಿಸಿತು. ಬಿದ್ದಾಟಂಡ 4 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತು. ಗ್ರಾಮದಲ್ಲಿನ ಹಬ್ಬದ ನಡುವೆ ಬಿದ್ದಾಟಂಡ ಕ್ರಿಕೆಟ್‍ನಲ್ಲಿ ಪಾಲ್ಗೊಂಡಿತು. ಕೊಡವ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಆಟವಾಡಿದರು. ಬಿದ್ದಾಟಂಡ ಪರ ಬಾಲಕಿ ಹಾಗೂ ಇಬ್ಬರು ಕಿರಿಯರು ಆಟವಾಡಿದರು. ಚೆಟ್ಟೀರ ವಿಘ್ನೇಶ್ 35 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕೊಟ್ಟಂಗಡ ತಂಡವು ಮೀದೇರೀರವನ್ನು 9 ವಿಕೆಟ್‍ಗಳಿಂದ ಮಣಿಸಿತು. ಮೀದೇರೀರ 6 ಕ್ಕೆ 52 ರನ್, ಕೊಟ್ಟಂಗಡ 1 ವಿಕೆಟ್ ನಷ್ಟಕ್ಕೆ 53 ರನ್ ದಾಕಲಿಸಿತು. ಮೀದೇರೀರ ಮಿಥುನ್ 20 ರನ್ ಬಾರಿಸಿ ಪಂಧ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಬೊಳ್ಯಡ ತಂಡ ಕಾಯಪಂಡವನ್ನು 16 ರನ್‍ಗಳಿಂದ ಸೋಲಿಸಿತು. ಬೊಳ್ಯಡ 2 ವಿಕೆಟ್ ನಷ್ಟಕ್ಕೆ 86 ರನ್ ದಾಖಲಿಸಿತು. ಕಾಯಪಂಡ ನಿಗಧಿತ ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿತು. ಬೊಳ್ಯಡ ಪರ 86 ರ ವೃದ್ಧ ತಿಮ್ಮಯ್ಯ, ಮಗ ಹಾಗೂ ಮೊಮ್ಮಗ ಹಾಗೂ ಮೂವರು ಮಹಿಳೆಯರು ಆಟವಾಡಿ ಗಮನ ಸೆಳೆದರು. ಕಾಯಪಂಡ ಪೂವಣ್ಣ 21 ರನ್ ಬಾರಿಸಿ ಪಂದ್ಯ ಶ್ರೇಷ್ಠರಾದರು.

ಕಲ್ಲೇಂಗಡ ತಂಡವು ಅಲ್ಲಂಗಡ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿತು. ಅಲ್ಲಂಗಡ 4 ಕ್ಕೆ 63 ರನ್, ಕಲ್ಲೇಂಗಡ 4 ವಿಕೆಟ್‍ಗೆ 68 ರನ್ ಬಾರಿಸಿತು. ಅಲ್ಲಂಗಡ ಶರತ್ 37 ರನ್ ಹೊಡೆದು ಪಂದ್ಯ ಶ್ರೇಷ್ಠರಾದರು.

ಕೋಟ್ರಮಾಡ ತಂಡವು ಮಲ್ಲಾಜಿರ ತಂಡವನ್ನು 19 ರನ್‍ಗಳಿಂದ ಮಣಿಸಿತು. ಕೋಟ್ರಮಾಡ 8 ವಿಕೆಟ್‍ಗೆ 88 ರನ್, ಮಲ್ಲಾಜೀರ 6 ಕ್ಕೆ 68 ರನ್ ದಾಖಲಿಸಿತು. ಮಲ್ಲಾಜೀರ ಸಂಜಯ್ 23 ರನ್ ದಾಖಲಿಸಿ ಪಂದ್ಯ ಶ್ರೇಷ್ಠರಾದರು.

ಆಪಟ್ಟೀರ ತಂಡವು ಬಾಳೇಯಡ ತಂಡದ ವಿರುದ್ದ 8 ವಿಕೆಟ್‍ಗಳಿಂದ ಗೆಲುವು ದಾಖಲಿಸಿತು. ಬಾಳೇಯಡ 4 ವಿಕೆಟ್‍ಗೆ 54 ರನ್, ಆಪಟ್ಟೀರ 2 ವಿಕೆಟ್‍ಗೆ 56 ರನ್ ದಾಖಲಿಸಿತು. ಬಾಳೇಯಡ ರಾಜೇಶ್ 20 ರನ್ ಹೊಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮೂಕೊಂಡ ತಂಡವು ಉದಿನಾಡಂಡ ತಂಡವನ್ನು 9 ವಿಕೆಟ್‍ಗಳಿಂದ ಮಣಿಸಿತು. ಉದಿನಾಡಂಡ 8 ಕ್ಕೆ 34 ರನ್, ಮೂಕೊಂಡ 1 ವಿಕೆಟ್‍ಗೆ 38 ರನ್ ಗಳಿಸಿತು. ಉದಿನಾಡಂಡ ಸಾಗರ್ ಮಾಚಯ್ಯ 15 ರನ್ ಬಾರಿಸಿ ಪಂಧ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಬಲ್ಲಂಡ ತಂಡವು ಅವರೆಮಾದಂಡ ತಂಡವನ್ನು 8 ವಿಕೆಟ್‍ಗಳಿಂದ ಮಣಿಸಿತು. ಅವರೆಮಾದಂಡ 10 ವಿಕೆಟ್‍ಗೆ 58 ರನ್, ಬಲ್ಲಂಡ 2 ವಿಕೆಟ್‍ಗೆ 63 ರನ್ ದಾಖಲಿಸಿತು. ಅವರೆಮಾದಂಡ ಅನಿಲ್ 31 ರನ್ ಬಾರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಕೋಟ್ರಂಗಡ ತಂಡವು ಕಡೇಮಾಡ ತಂಡವನ್ನು 9 ವಿಕೆಟ್‍ಗಳಿಂದ ಮಣಿಸಿತು. ಕಡೇಮಾಡ 6 ಕ್ಕೆ 62 ರನ್, ಕೋಟ್ರಂಗಡ 1 ವಿಕೆಟ್‍ಗೆ 63 ರನ್ ಬಾರಿಸಿ ಗೆಲುವು ಪಡೆಯಿತು. ರಾಜ್ಯ ರಣಜಿ ಆಟಗಾರ ಕೋಟ್ರಂಗಡ ಪಿ ಅಪ್ಪಣ್ಣ ಕುಟುಂಬದ ಜೆರ್ಸಿ ತೊಟ್ಟು ಗಾಯದ ಸಮಸ್ಯೆಯಿಂದಾಗಿ ಆಟವಾಡದೆ ತಂಡಕ್ಕೆ ಶುಭ ಹಾರೈಸಿದರು. ಕಡೇಮಾಡ ರಿತೇಶ್ 15 ರನ್ ಪಂದ್ಯ ಶ್ರೇಷ್ಠರಾದರು.

ಮಾಳೇಟೀರ (ಕೆದಮುಳ್ಳೂರು) ತಂಡವು ಮಲ್ಲಮಾಡ ತಂಡದ ವಿರುದ್ದ 8 ವಿಕೆಟ್ ಗೆಲುವು ದಾಖಲಿಸಿತು. ಮಲ್ಲಮಾಡ 3 ವಿಕೆಟ್‍ಗೆ 60 ರನ್, ಮಾಳೇಟೀರ 2 ವಿಕೆಟ್‍ಗೆ 62 ರನ್ ದಾಖಲಿಸಿತು. ಮಲ್ಲಮಾಡ ಸುದಿ 20 ರನ್ ಹೊಡೆದು ಪಂದ್ಯ ಶ್ರೇಷ್ಠರಾದರು.