ಕುಶಾಲನಗರ, ಮೇ 3: ಕಾವಡಿಗರಿಗೆ ಆನೆ ಸಾಕಾಣಿಕೆ ಬಗ್ಗೆ ಹೆಚ್ಚಿನ ತರಬೇತಿಗಾಗಿ ವಿದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ಹರಿಸಲಾಗಿದೆ ಎಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದರು.ಗಂಧದಕೋಟೆಯ ಅರಣ್ಯ ರಕ್ಷಕರ ತರಬೇತಿ ಕೇಂದ್ರದಲ್ಲಿ ನಡೆದ 2017-18ನೇ ಸಾಲಿನ ಆನೆ ಕಾವಾಡಿಗರ 1ನೇ ತಂಡದ ಬುನಾದಿ ತರಬೇತಿಯ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರ ರಾಷ್ಟ್ರಗಳಿಗಿಂತ ಭಾರತದಲ್ಲಿನ ಆನೆ ಶಿಬಿರಗಳು ಉತ್ತಮ ತರಬೇತಿ ಕೇಂದ್ರಗಳಾಗಿ ಹೊರಹೊಮ್ಮಲು ಕಾವಡಿಗರು, ಮಾವುತರು ಶ್ರಮಿಸಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ಮಾವುತರಿಗೂ ಕೂಡ ಬುನಾದಿ ತರಬೇತಿ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ತರಬೇತಿ ನೀಡಲು ಚಿಂತನೆ ಹರಿಸಲಾಗಿದೆ ಎಂದರು.ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನೀತ್ ಪಾಠಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತರಬೇತಿ ಪಡೆದ 41 ಮಂದಿ ಕಾವಾಡಿಗರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಡುಗೋಡಿಯ ಅರಣ್ಯ ತಾಂತ್ರಿಕ ಮತ್ತು ಆಡಳಿತ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಹೆಚ್‍ಎಸ್‍ಎಸ್ ಮೂರ್ತಿ ಮಾತನಾಡಿದರು.

ಗಂಧದಕೋಟೆ ಅರಣ್ಯ ರಕ್ಷಕರ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ರಾಮಕೃಷ್ಣ ತರಬೇತಿ ಕೇಂದ್ರದ ವರದಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಕಾವಾಡಿಗರು ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ತರಬೇತಿ ಹೊಂದಿದ ಕಾವಾಡಿಗರಿಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಅವರು ಉಚಿತವಾಗಿ ನೀಡಿದ ಟೀ ಶರ್ಟ್‍ಗಳನ್ನು ಈ ಸಂದರ್ಭ ವಿತರಿಸಲಾಯಿತು.

ಕಾವಡಿಗರಾದ ಮಹಮ್ಮದ್ ಮತ್ತು ತಂಡ ಪ್ರಾರ್ಥಿಸಿದರು. ವಲಯ ಅರಣ್ಯಾಧಿಕಾರಿಗಳಾದ ತೀರ್ಥ ಸ್ವಾಗತಿಸಿದರು, ರಾಘವೇಂದ್ರ ಜಿ.ನಾಯಕ್ ನಿರೂಪಿಸಿದರು.