ಲೇಖನದ ತಲೆ ಬರಹ ನೋಡಿ ಹುಬ್ಬೇರಿಸಿಕೊಳ್ಳಬೇಡಿ. ಆತ ‘‘ಮುಸ್ರತ್ ಪಾಷ’’ ಮೈಸೂರು ಜಿಲ್ಲೆ ಕೆ. ಆರ್. ನಗರದಲ್ಲಿ ಪೌರಾಣಿಕ ನಾಟಕ ಕಲಾವಿದ ಸಾಹಿಬ್ ಜಾನ್‍ನ ಪುತ್ರನಾಗಿ 1967ರಲ್ಲಿ ಜನಿಸಿದವರು.

ಬಾಲ್ಯ ಸಹಜ ವಿದ್ಯಾಭ್ಯಾಸ ಗಳನ್ನು ಪೂರೈಸಿದ ಈತ ಜೀವನಕ್ಕೆ ಆಯ್ದುಕೊಂಡ ಕ್ಷೇತ್ರ ಬೈಕ್ ಮೆಕಾನಿಸಂ. ಚೆನ್ನರಾಯ ಪಟ್ಟಣದಲ್ಲಿ ‘ನಾಗ’ ಎಂಬ ಗುರುವಿನ ಗರಡಿಯಲ್ಲಿ ಬುಲೆಟ್ ಬೈಕಿನ ಎದೆಯಾಳವನ್ನೆಲ್ಲ ಬಗೆದು ಅದರ ನಾಡಿಮಿಡಿತದಲ್ಲೇ ಪರಿಹಾರ ನೀಡಬಲ್ಲ ಪರಿಣಿತ ನಾಗಿ ಬಿಟ್ಟರು ಅದು ಕೊಡಗಿನ ಆ ದಿನಗಳಲ್ಲಿ. ಕೊಡಗಿನಲ್ಲಿ ಗುಡು-ಗುಡು ಶಬ್ದದ ಬುಲೆಟ್ ಬೈಕ್‍ಗಳ ಓಡಾಟ ಹೆಚ್ಚೇ ಇದ್ದವು. ಬದುಕು ಕಂಡುಕೊಳ್ಳಲು ಕೊಡಗು ಸೂಕ್ತವೆಂದು ಸ್ಪ್ಯಾನರ್, ಸ್ಕ್ರೂಡ್ರೈವರ್ ಹಿಡಿದುಕೊಂಡು ಬಂದ ಮುಸ್ರತ್ ಪಾಷ ಮಡಿಕೇರಿಯ ಹಿಲ್‍ರೋಡಿನಲ್ಲಿ ಬುಲೆಟ್ ಕ್ಲಿನಿಕ್ ಒಂದನ್ನು ತೆರದು ಬಿಡುತ್ತಾರೆ. ವೃತ್ತಿಯಲ್ಲಿ ಬದ್ಧತೆ ಕಾಯ್ದುಕೊಳ್ಳುತ್ತಾ ಹೋದಂತೆ ಎಲ್ಲರ ಪ್ರೀತಿಯ ‘‘ಬಾಬು’’ವಾಗಿ ನಾಮಕರಿಸಿ ಕೊಂಡು ನಂತರ ಬುಲೆಟ್‍ಬಾಬು ವಾಗಿ ಖ್ಯಾತಿಗೊಳ್ಳುತ್ತಾರೆ. ಕಲಾವಿದರ ತಂದೆ ಸಾಹಿಬ್ ಜಾನ್‍ರ ರಕ್ತ ಈತನಲ್ಲೂ ಹರಿದಾಡುವದರ ಪರಿಣಾಮ ಅಂತರಂಗದಲ್ಲಿ ಕಲಾವಿದನೊಬ್ಬ ಆಗಾಗ್ಗೆ ಕೆಮ್ಮುತ್ತಿದ್ದರೂ ಕಲಾವಿದ ಹೊರ ಹೊಮ್ಮಲು ಅವಕಾಶವಾಗಿರಲಿಲ್ಲ.

ಅದು 1990ನೇ ಇಸವಿ ‘‘ಬಾಳ್‍ಪೊಲಂದತ್’’ ಎಂಬ ಕೊಡವ ಭಾಷಾ ಸಿನಿಮಾಕ್ಕಾಗಿ ನಟರ ಆಯ್ಕೆ ನಡೆಯುತ್ತದೆ. ಮುಸರತ್ ಪಾಷ ಆಲಿಯಾಸ್ ಬುಲೆಟ್‍ಬಾಬು ಆ ಸಿನಿಮಾ ದಲ್ಲೊಂದು ಪಾತ್ರಕ್ಕೆ ಆಯ್ಕೆ ಆಗಿ ಬಿಡುತ್ತಾರೆ. ಸಿನೆಮಾ ಚಿತ್ರೀಕರಣದ ಸಮಯದಲ್ಲಿ ಪ್ರಾದೇಶಿಕ ಚಿತ್ರ ಬಾಳ್‍ಪೊಲಂದತ್‍ಗೆ ಪ್ರಚಾರ ಕೊಡುವ ನಿಟ್ಟಿನಲ್ಲಿ ಕೊಡಗಿನ ಶಕ್ತಿ ದಿನಪತ್ರಿಕೆ ಈತನ ನಟನೆಯ ಭಾಚಿತ್ರದೊಂದಿಗೆ ಲೇಖನ ಪ್ರಕಟಿಸಿ ಬಿಟ್ಟದ್ದು ಈತ ಬದುಕಿನಲ್ಲಿ ಬದಲಾವಣೆಗೆ ನಾಂದಿಯಾಗುತ್ತದೆ. ಬಾಳ್ ಪೊಲಂದತ್ ಶೀರ್ಷಿಕೆಯ ಅನ್ವರ್ಥನಾಮದಂತೆ ಶಕ್ತಿ ಪತ್ರಿಕೆ ಯಲ್ಲಿ ಪ್ರಕಟಗೊಂಡ ಚಿತ್ರಲೇಖನ ದಿಂದ ಈತ ಮುಂದೆ ಕೊಡಗಿನ ಮನೆ ಮಾತಾಗಿ ಬಿಡುತ್ತಾರೆ.

1991ರಲ್ಲಿ ರಮೇಶ್ ಅರವಿಂದ್ ನಿದೇರ್ಶನದ ‘ಅಂತರಗಾವಿ’ ಸಿನಿಮಾದಲ್ಲೊಂದು ಪುಟ್ಟ ಪಾತ್ರ ಗಿಟ್ಟಿಸಿಕೊಳ್ಳಲೂ ಇದೇ ‘‘ಶಕ್ತಿ’’ಯ ಲೇಖನ ಸಹಕಾರಿಯಾಗುತ್ತದೆ. ಹಾಗೆಯೇ ‘ಬಾಳ್ ಪೊಲಂದತ್’ ಸಿನೆಮಾಕ್ಕೆ ಸಿಕ್ಕಿದ ರಾಜ್ಯ ಪ್ರಶಸ್ತಿಯೂ ಕೂಡ.

ಬದುಕಲು ಬುಲೆಟ್ ಬೈಕ್ ನೊಂದಿಗೆ ಸರ್ಕಸ್ ಮಾಡುತ್ತಲೇ ಇಂದಿಗೂ ಜೀವನ ನಡೆಸುತ್ತಿರುವ ಬಾಬುವಿಗೆ ಚಂದನವನದ ಬಾಗಿಲು ಪೂರ್ಣವಾಗಿ ತೆರೆದುಕೊಳ್ಳಲು ಕಾರಣವಾದದ್ದು ದರ್ಶನ್ ನಟಿಸಿ ಸೂಪರ್ ಹಿಟ್ ಆದ ‘ಮೆಜೆಸ್ಟಿಕ್’ ಸಿನೆಮಾ,

‘ಮೆಜೆಸ್ಟಿಕ್’ ಸಿನೆಮಾದಲ್ಲಿ ನಾಯಕ ನಟ ದರ್ಶನ್‍ನ ಗೆಳೆಯ ನಾಗಿ ನಟಿಸಿದ ಈತ, ನಂತರ ಹಿಂದಿರುಗಿ ನೋಡಲಿಲ್ಲ. ದರ್ಶನ್ ನಟನೆಯ 47ನೇ ಸಿನೆಮಾ ‘‘ಚಕ್ರವರ್ತಿ’’ ಇದೀಗ ಬಿಡುಗಡೆ ಯಾಗಿ ಚಲನ ಚಿತ್ರರಂಗದಲ್ಲಿ ಅವರು ಅರ್ಧ ಸೆಂಚುರಿ ಬಾರಿಸಲು ಇನ್ನೂ ಮೂರು ಸಿನೆಮಾ ಮಾಡಬೇಕಿದೆ.

ಆದರೆ ನಮ್ಮ ಕೊಡಗಿನ ಬುಲೆಟ್ ಬಾಬುಗೆ ಕನ್ನಡ ಮತ್ತು ತಮಿಳು ಸೇರಿ 53 ಸಿನಿಮಾಗಳಲ್ಲದೆ ಕೆಲವಾರು ಧಾರಾವಾಹಿಗಳಲ್ಲೂ ನಟಿಸಿದ ಹೆಗ್ಗಳಿಕೆ ದಾಖಲೆಯಾಗಿ ಹೋಗಿದೆ.

ಕನ್ನಡದ ಇಂದಿನ ಮೇರು ನಟರುಗಳಾದ ದರ್ಶನ್, ಸುದೀಪ್, ಪುನೀತ್ ಶಿವರಾಜ್‍ಕುಮಾರ್ ಮತ್ತು ಆಗಿ ಹೋದ ವಿಷ್ಣುವರ್ಧನ್‍ರ ಜೊತೆಯಲ್ಲೂ ಬಾಬುವಿಗೆ ನಟಿಸುವ ಅವಕಾಶ ಲಭಿಸಿದೆ. ಹಾಗೆ ತಮಿಳಿನ ವಿಕ್ರಂ ಮತ್ತು ಶರತ್‍ಕುಮಾರ್ ಜೊತೆಯಾಗಿ ‘‘ಮಜ’’ ಹಾಗೂ ಚಾಣಾಕ್ಯನ್ ಸಿನಿಮಾಗಳಲ್ಲಿ ತಮ್ಮ ಅಭಿನಯ ವನ್ನು ಪ್ರದರ್ಶಿಸಿದ್ದಾರೆ. ಡಾ|| ರಾಜ್‍ಕುಮಾರ್ ಜತೆಯಲ್ಲಿ ಪರದೆ ಹಂಚಿಕೊಳ್ಳುವ ಸೌಭಾಗ್ಯ ಮಾತ್ರ ದೊರಕಲಿಲ್ಲ. ಎಂಬ ಕೊರಗು ಇದೆಯಾದರೂ ‘‘ಗಜ’’ ‘ಉಪ್ಪಿದಾದ ಎಂಬಿಬಿಎಸ್’, ‘ರೌಡಿ ಅಳಿಯ’, ‘ನಂದಿ’, ‘ಬಿಂದಾಸ್’ ಸೇರಿದಂತೆ ಒಟ್ಟು 50 ಸಿನಿಮಾಗಳನ್ನು ಪೂರೈಸಿದ ಹೆಗ್ಗಳಿಕೆ ಬುಲೆಟ್ ಬಾಬುವಿನದು ಕಲಾರಾಧನೆಯಿಂದ ಇವರು ಸಿರಿತನವನ್ನೇನೂ ಕಂಡುಕೊಂಡಿಲ್ಲ ವಾದರೂ ಕಲೆ ದೇವರು ಎಂದು ಕರೆದುಕೊಳ್ಳುವ ಬಾಬು ಸತ್ತು ಮಣ್ಣಾಗುವವರೆಗೂ ಕಲೆ ನಮ್ಮಲ್ಲೇ ಇರುತ್ತದೆ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

2015 ರಲ್ಲಿ ನಡೆದ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವ ದಲ್ಲಿ ಇವರನ್ನು ಸನ್ಮಾನಿಸಿದ್ದೂ ಸೇರಿದಂತೆ ಬೆಂಗಳೂರಿನಲ್ಲಿ ಬಲಗಂಗಾಧರ ಸ್ವಾಮಿಗಳು, ಸಿದ್ಧಗಂಗಾ, ಶಿವಕುಮಾರ ಸ್ವಾಮಿಗಳು ಸೇರಿದಂತೆ ಹತ್ತು ಹಲವಾರು ಕಡೆ ಇವರ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಗಿದೆ.

ಕೂರ್ಗ್ ಡೆಂಟಲ್ ಟೈಮ್ಸ್ ಎಂಬ ಬುಲೆಟಿನ್‍ನ ಫೇಮಸ್ ಕೂರ್ಗ್ ಪರ್ಸನಾಲಿಟಿಸ್ ಕಾಲಂನಲ್ಲಿ ಎಫ್.ಎಂ.ಕೆ.ಎಂ.ಸಿ. ಕಾರ್ಯಪಜ್ಜ ಜತೆಯಲ್ಲಿ ಈ ಮುಸ್ರತ್ ಪಾಷ, ಬುಲೆಟ್ ಬಾಬು ಹೆಸರನ್ನು ಪ್ರಕಟಿಸಿರುವದು ಬಾಬುವಿಗೆ ಆಸ್ಕರ್ ಪ್ರಶಸ್ತಿ ದೊರಕಿದÀಷ್ಟು ಸಂತೋಷವು ಹೌದು. ಇದೀಗ ‘‘ಭಜರಂಗಿ ಬಾಬು’’ ಎಂಬ ಕಿರು ಚಿತ್ರವನ್ನು ತಯಾರಿಸಲು ಹೊರಟಿರುವ ಇವರಿಗೆ ಶುಭ ಹಾರೈಸೋಣ. ಹಾಗೆಯೇ ಕೊಡಗಿನ ಕಲಾ ಪ್ರೇಮಿಗಳು ಈ ಪ್ರತಿಭೆಯನ್ನು ಗುರುತಿಸಿ ಗೌರವಿಸು ವಂತಾಗಲಿ ಎಂದು ಆಶಿಸೋಣ.