ಕುಶಾಲನಗರ, ಮೇ 3: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಹಾಗೂ ದಾದಿಯರ ನೇಮಕಕ್ಕೆ ಆಗ್ರಹಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರಕಾರ ಹಾಗೂ ಆರೋಗ್ಯ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆಂದು ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಾರೆ. ಜನಸಂಖ್ಯೆ ಹೆಚ್ಚುತ್ತಿದ್ದರೂ ಹೆಚ್ಚುವರಿ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಗಳನ್ನು ನೇಮಿಸದ ಕಾರಣ ರೋಗಿಗಳು ಪರದಾಡುವಂತಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಹೆಚ್ಚಿನ ಚಿಕಿತ್ಸೆಗೆ ನೆರೆಯ ಜಿಲ್ಲಾಸ್ಪತ್ರೆಯನ್ನು ಅವಲಂಬಿಸುವಂತಾಗಿದೆ ಎಂದರು. ಸರಕಾರ ಕೂಡಲೇ ಇತ್ತ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುವದು ಎಂದು ಅವರು ಎಚ್ಚರಿಸಿದರು.

ಇದೇ ಸಂದರ್ಭ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ವೈದ್ಯರಾದ ಡಾ. ಇಂದ್ರಾಣಿ ಅವರ ಮೂಲಕ ಆರೋಗ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸೋಮವಾರ ಪೇಟೆ ತಾಲೂಕು ಅಧ್ಯಕ್ಷ

ಕೆ.ಎಸ್. ಮಂಜುನಾಥ್, ನಗರಾಧ್ಯಕ್ಷ ಚಂದ್ರೇಗೌಡ, ಪ್ರಮುಖರಾದ ವಿಶ್ವನಾಥ್, ಮೂರ್ತಿ, ಕುಮಾರ್, ಅಭಿಷೇಕ್, ಕೆ.ಆರ್. ಮಂಜುನಾಥ್, ತಬಲ ವಿಜಯಕುಮಾರ್ ಮತ್ತಿತರರು ಇದ್ದರು.