ಮಡಿಕೇರಿ, ಮೇ 3 : ಕೊಂಡಂಗೇರಿಯ ಶಿಫಾ ಕೇಂದ್ರ ಮುಸಾಫರ್ ಖಾನಾ ಸಂಸ್ಥೆ 30 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಕೇಂದ್ರದಲ್ಲಿ ತಾ. 5 ರಿಂದ 7ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಧರ್ಮೋಪದೇಶ, ಅಸ್ಮಾಉಲ್ ಹುಸ್ನಾ, ಧಿಕ್ರ್ ಮಜ್ಲಿಸ್, ಮಜ್ಲಿಸುನ್ನೂರ್ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆÉ ಎಂದು ಕೇಂದ್ರದ ಮುಖ್ಯಸ್ಥರಾದ ಸಿ.ಬಿ. ಮೊಹಮ್ಮದ್ ಅಸ್ರತ್ ಬಾಬಾ ತಿಳಿಸಿದ್ದಾರೆ.

ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಒತ್ತು ನೀಡುವ ಮಹತ್ಕಾರ್ಯವನ್ನು ಶಿಫಾ ಕೇಂದ್ರ ಹಮ್ಮಿಕೊಂಡಿದ್ದು, 2016ನೇ ಸಾಲಿನಲ್ಲಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡ 80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ ಜಿಲ್ಲೆಯ ಮುಸ್ಲಿಮ್ ಜನಾಂಗದ ವಿದ್ಯಾರ್ಥಿಗಳಿಗೆ ಹಾಗೂ ಧಾರ್ಮಿಕ ಶಿಕ್ಷಣದಲ್ಲಿ 5 ನೇ ತರಗತಿ 7, 10 ಹಾಗೂ 12ನೇ ತರಗತಿ (ಅರಬ್ಬಿ)ಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಳಿಸಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ನಗದು ಬಹುಮಾನ ವನ್ನು ನೀಡಿ ಗೌರವಿಸಲಾಗುವದು.

ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಎಂ.ಎ.ಯಲ್ಲಿ ಚಿನ್ನದ ಪದಕ ಗಳಿಸಿರುವ ಮಾದಾಪುರದ ಪ್ರತಿಭಾವಂತ ವಿದ್ಯಾರ್ಥಿ ಕೆ.ಹೆಚ್. ಮುಸ್ತಫಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವದು. ಪ್ರತಿಭಾ ಪುರಸ್ಕಾರ ಸಮಾರಂಭ ತಾ. 7 ರಂದು ಮಧ್ಯಾಹ್ನ 2 ಗಂಟೆಗೆ ಶಿಫಾ ಕೇಂದ್ರದಲ್ಲಿ ನಡೆಯಲಿದೆ. ಮಾಜಿ ಶಾಸಕರಾದ ಕೆ.ಎಂ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಧರ್ಮಗುರು ದುಗ್ಗಲಡ್ಕದ ಸಯ್ಯದ್ ಝೈನುಲ್ ಆಭಿದೀನ್ ತಂಞಳ್ ಉದ್ಘಾಟಿಸಲಿದ್ದಾರೆ. ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ಹೆಚ್.ಆರ್.ಅರ್ಜುನ್ ಅವರು ಶಿಕ್ಷಣದ ಮಹತ್ವದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಧರ್ಮಗುರು ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಆನಮಜಾಡ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಾ ಪುರಸ್ಕಾರಕ್ಕೆ 62 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳು ಮೇ 7 ರಂದು ಮಧ್ಯಾಹ್ನ 1 ಗಂಟೆಗೆ ಶಿಫಾ ಕೇಂದ್ರದಲ್ಲಿ ಹಾಜರಿರುವಂತೆ ಸಿ.ಬಿ.ಮೊಹಮ್ಮದ್ ಅಸ್ರತ್ ಬಾಬಾ ವಿನಂತಿಸಿ ಕೊಂಡಿದ್ದಾರೆ.

ವಾರ್ಷಿಕೋತ್ಸವದ ಪ್ರಯುಕ್ತ ತಾ. 5 ರಿಂದ 7 ರವರೆಗೆ ಪ್ರತಿದಿನ ರಾತ್ರಿ ಧಾರ್ಮಿಕ ಉಪನ್ಯಾಸಗಳು ನಡೆಯಲಿದ್ದು, ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.