ಕುಶಾಲನಗರ, ಮೇ 3: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಜನಸಂಪರ್ಕ ಸಭೆ ವೃತ್ತ ನಿರೀಕ್ಷಕ ಕ್ಯಾತೆಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಸುಧಾರಿತ ಬೀಟ್ ವ್ಯವಸ್ಥೆ ಕುರಿತಾಗಿ ಚರ್ಚೆಗಳು ನಡೆದವು. ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ ವ್ಯಾಪ್ತಿಗೆ ರಾತ್ರಿ ಗಸ್ತಿಗೆ ಪೇದೆಗಳನ್ನು ನಿಯೋಜಿಸಲು ಹಲವು ಬಾರಿ ಮನವಿ ಮಾಡಲಾಗಿದ್ದರೂ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ಮಾತನಾಡಿದ ವೃತ್ತ ನಿರೀಕ್ಷಕ ಕ್ಯಾತೆಗೌಡ, ಈಗಾಗಲೇ ಎಲ್ಲೆಡೆ ರಾತ್ರಿ ಗಸ್ತಿಗೆ ಪೇದೆಗಳನ್ನು ನಿಯೋಜಿಸಲಾಗಿದೆ. ಪ್ರತಿ ಗ್ರಾಮಗಳಲ್ಲಿ 20 ಗ್ರಾಮಸ್ಥರ ಸಮಿತಿಯೊಂದನ್ನು ರಚಿಸಲಾಗಿದೆ. ರಾತ್ರಿ ಗಸ್ತಿಗೆ ನಿಯೋಜಿಸಿರುವ ಪೇದೆಯ ವಿವರ, ಭಾವಚಿತ್ರ, ದೂರವಾಣಿ ಸಂಖ್ಯೆಯನ್ನು ಒಳಗೊಂಡ ಬ್ಯಾನರ್‍ಗಳನ್ನು ಪ್ರತಿ ಗ್ರಾಮಗಳಲ್ಲಿ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಠಾಣಾಧಿಕಾರಿ ಜೆ.ಇ. ಮಹೇಶ್ ಸುಧಾರಿತ ಬೀಟ್ ವ್ಯವಸ್ಥೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ವಿವರ ಒದಗಿಸಿದರು.