ಕೂಡಿಗೆ, ಮೇ 3: ನಿನ್ನೆ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಮಧ್ಯಾಹ್ನ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ದಿನ ಭಾರೀ ಗಾಳಿ ಮಳೆ ಸುರಿದಿರು ವದರಿಂದ ಈ ವ್ಯಾಪ್ತಿಯ 30 ಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಅವರುಗಳಿಂದ ಅರ್ಜಿಗಳನ್ನು ಪಡೆದು ತುರ್ತಾಗಿ ಕಂದಾಯ ಇಲಾಖೆ ವತಿಯಿಂದ ಪರಿಹಾರ ಕೊಡಿಸುವ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವದು. ತಕ್ಷಣವೆ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ತುರ್ತು ಕ್ರಮ ಕೈಗೊಳ್ಳು ವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಇದ್ದಕ್ಕಿದ್ದಂತೆ ಸುರಿದ ಆಲಿಕಲ್ಲು ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರ ಬೆಳೆಗಳಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಇದೇ ಸಂದರ್ಭ ಶಾಸಕರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ನಷ್ಟಕ್ಕೊಳಗಾಗಿದ್ದ ಧನಂಜಯ್ ಎಂಬವರ ಜಮೀನಿಗೆ ತೆರಳಿ ಖುದ್ದಾಗಿ ಪರಿಶೀಲಿಸಿದರು. ಸೀಗೆಹೂಸೂರಿನ ಬಾಲಚಂದ್ರ ಎಂಬವರಿಗೆ ಸೇರಿದ ಮನೆಯ 80 ಸಿಮೆಂಟ್ ಶೀಟ್‍ಗಳು ನೆಲಕ್ಕುರುಳಿ ಪುಡಿ ಪುಡಿಯಾಗಿರುವದನ್ನು ಶಾಸಕರು ವೀಕ್ಷಿಸಿದರು.

ಈ ಸಂದರ್ಭ ತಾ.ಪಂ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿ.ಪಂ ಸದಸ್ಯೆ ಮಂಜುಳಾ, ತಾ.ಪಂ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ ಸದಸ್ಯ ಬಾಸ್ಕರ್, ಗ್ರಾ.ಪಂ ಮಾಜಿ ಸದಸ್ಯ ಧನಂಜಯ್ ಇದ್ದರು.

ಇಂದು ಭಾರೀ ಮಳೆ: ಮಂಗಳವಾರ 5 ಗಂಟೆ ಸಂದರ್ಭದಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ರಾಶಿ ರಾಶಿ ಆಲಿಕಲ್ಲು ಮಳೆ ಜನರನ್ನು ಭಯಬೀತರನ್ನಾಗಿಸಿತು.