ಸೋಮವಾರಪೇಟೆ, ಮೇ 3: ಸಮೀಪದ ಕೆಂಚಮ್ಮನಬಾಣೆಯ ಶ್ರೀ ಆದಿ ನಾಗಬ್ರಹ್ಮ ಮೊಗ್ಗೇರ್ಕಳ ಯುವಕ ಸಂಘ ಅಯೋಜಿಸಿದ್ದ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ ಪುರುಷರ ಕಬಡ್ಡಿ ಪಂದ್ಯಾಟದ ಪ್ರಥಮ ಬಹುಮಾನವನ್ನು ತೋಳೂರು ಶೆಟ್ಟಳ್ಳಿಯ ಎಸ್.ಕೆ. ಫ್ರೆಂಡ್ಸ್ ತಂಡ ತನ್ನದಾಗಿಸಿಕೊಂಡಿತು.

ಪಂದ್ಯಾಟದಲ್ಲಿ ದ್ವಿತೀಯ ಬಹುಮಾನವನ್ನು ಮಿನಿಸ್ಟರಸ್ ಕೋರ್ಟ್ ತಂಡ ಪಡೆದರೆ, ವಸಂತ ಪೂಜಾರಿ ‘ಎ’ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 18 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದರಾದರೂ ಅಂತಿಮ ಹಣಾಹಣಿಗೆ ತೋಳೂರುಶೆಟ್ಟಳ್ಳಿಯ ಎಸ್.ಕೆ. ಫ್ರೆಂಡ್ಸ್ ಹಾಗೂ ಮಿನಿಸ್ಟರ್ಸ್ ಕೋರ್ಟ್ ತಂಡ ಎದುರಾಯಿತು.

ಎಸ್.ಕೆ. ಫ್ರೆಂಡ್ಸ್ ತಂಡ 13 ಅಂಕಗಳಿಸುವ ಮೂಲಕ ವಿಜಯದ ಪತಾಕೆ ಹಾರಿಸುವದರೊಂದಿಗೆ ರೂ.15,555 ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡರೆ, ಮಿನಿಸ್ಟರ್ಸ್ ಕೋರ್ಟ್ ತಂಡ 10 ಅಂಕ ಗಳಿಸುವ ಮೂಲಕ ದ್ವಿತೀಯ ಬಹುಮಾನ ನಗದು 7,777 ಹಾಗೂ ಆಕರ್ಷಕ ಪಾರಿತೋಷಕ ಪಡೆಯಿತು. ಮೂರನೇ ಸ್ಥಾನವನ್ನು ಪಡೆದ ವಸಂತಪೂಜಾರಿ ಎ ತಂಡ ನಗದು 3,333 ಹಾಗೂ ಪಾರಿತೋಷಕ ತನ್ನದಾಗಿಸಿಕೊಂಡಿತು.

ಸರ್ವೋತ್ತಮ ಆಟಗಾರನಾಗಿ ವಸಂತ ಪೂಜಾರಿ ತಂಡದ ರತನ್, ಉತ್ತಮ ಧಾಳಿಗಾರನಾಗಿ ಮಿನಿಸ್ಟರ್ಸ್ ಕೋರ್ಟ್ ತಂಡದ ಅಜೀಜ್ ಹಾಗೂ ಉತ್ತಮ ಹಿಡಿತಗಾರನಾಗಿ ವಸಂತ ಪೂಜಾರಿ ತಂಡದ ರಘುರವರುಗಳು ಬಹುಮಾನ ಪಡೆದರೆ, ಶಿಸ್ತಿನ ತಂಡವೆಂಬ ಶಹಬ್ಬಾಸ್‍ಗಿರಿಗೆ ಕಾರೆಕೊಪ್ಪದ ಬಿ.ವೈ.ಸಿ. ತಂಡ ಪಾತ್ರವಾಯಿತು.

ತಂಡಗಳಲ್ಲಿ ಪ್ರೋ ಕಬಡ್ಡಿಯಲ್ಲಿ ಮಿಂಚಿದ ಕಲ್ಲುಗುಂಡಿಯ ವಿಶ್ವಾಸ್, ರಾಜ್ಯ ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಸೆಣಸಿದ ಉಜಿರೆಯ ರತನ್, ತವನ್, ರಘು, ಸರ್ದಾರ್, ನಂದೀಶ್, ನ್ಯಾಷನಲ್ ಪ್ರವೇಶಿಸಿದ್ದ ಅಜೀಜ್ ಸೇರಿದಂತೆ ಪ್ರಮುಖರು ಪಂದ್ಯಾಟದಲ್ಲಿ ಉತ್ತಮ ಆಟ ಪ್ರದರ್ಶಿಸಿದರು.

ಪಂದ್ಯಾಟಗಳಿಗೆ ಕರ್ನಾಟಕ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಪ್ರಮುಖ ಪೂಣಚ್ಚ, ವೈದ್ಯರಾದ ದೇವಿಕಾ, ಬೇಳೂರು ಗ್ರಾ.ಪಂ. ಮಾಜಿ ಸದಸ್ಯ ಜಿ. ಮಧು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯೆ ಚಂದ್ರಿಕಾ ಕುಮಾರ್, ಭಾರತಮಾತಾ ಸೇವಾ ಸಮಿತಿ ಅಧ್ಯಕ್ಷ ಆನಂದ್, ಬೆಂಗಳೂರಿನ ರವಿ ಮಾಲಾ, ಆಸ್ಟ್ರ ಕಾಫಿ ಸಂಸ್ಥೆಯ ಕೆ.ಡಿ. ಕುಮಾರ್, ಮೈಸೂರಿನ ಆರ್.ಆರ್. ಡಿಜಿಟಲ್‍ನ ರವಿ ಬಾಬು ಹಾಗೂ ರಘು ಚಾಲನೆ ನೀಡಿದರು.

ಪಂದ್ಯಾಟದ ತೀರ್ಪುಗಾರರು ಗಳಾಗಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ತೀರ್ಪುಗಾರರು ಗಳಾದ ಗೌಡಳ್ಳಿಯ ಪ್ರವೀಣ್, ಕೂಡಿಗೆಯ ಎ.ಎಂ. ಆನಂದ್, ಬೇಳೂರಿನ ಎಚ್.ಬಿ. ಕೃಷ್ಣಪ್ಪ, ಹಂಡ್ಲಿಯ ಕೃಷ್ಣ ಕಾರ್ಯ ನಿರ್ವಹಿಸಿದರು.

ಪಂದ್ಯಾಟದ ಯಶಸ್ಸಿಗಾಗಿ ಶ್ರೀ ಆದಿ ನಾಗಬ್ರಹ್ಮ ಮೊಗ್ಗೇರ್ಕಳ ಯುವಕ ಸಂಘದ ಅಧ್ಯಕ್ಷ ಕೆ.ಎ. ದಿನೇಶ್, ಕ್ರೀಡಾಧ್ಯಕ್ಷ ಕೆ.ಕೆ. ನಂದಕುಮಾರ್, ಕಾರ್ಯದರ್ಶಿ ಎಂ.ಎನ್. ಸದಾನಂದ, ಉಪಾಧ್ಯಕ್ಷ ದಿವಾಕರ್, ಖಜಾಂಚಿ ರಾಮು ಹಾಗೂ ನಿರ್ದೇಶಕರುಗಳು ಶ್ರಮಿಸಿದರು.