ಮಡಿಕೇರಿ, ಮೇ 3: ಬೆಂಗಳೂರಿನ ಡಾಕ್ಟರ್ ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನಗಳಿಸಿ, ಒಂದು ಲಕ್ಷ ನಗದು ಬಹುಮಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳು ಸಿ.ಎನ್.ಸಿ. (ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್) ಲೇತ್ (ಆಟೋಮೇಟೆಡ್ ಲೇತ್) ಎಂಬ ಪ್ರಾಜೆಕ್ಟನ್ನು ಕೇವಲ ರೂ. 1,26,000 ವೆಚ್ಚದಲ್ಲಿ ತಯಾರು ಮಾಡಿದ್ದರು. ಇದರ ಮುಖಬೆಲೆ ರೂ. 5 ರಿಂದ 20 ಲಕ್ಷದವರೆಗೆ ಇದ್ದು, ಕಾವೇರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಇದನ್ನು ಇಷ್ಟು ಕಡಿಮೆ ವೆಚ್ಚದಲ್ಲಿ ತಯಾರು ಮಾಡಿರುವದು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿನ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಕಾವೇರಿ ಪಾಲಿಟೆಕ್ನಿಕ್ ವಿಭಾಗದ ಬೋಧಕ ಉಣ್ಣಿಕೃಷ್ಣನ್ ಅವರ ಪರಿಶ್ರಮದ ಫಲವಾಗಿ ಅಭೂತಪೂರ್ವ ಯಂತ್ರ ನಿರ್ಮಾಣಗೊಂಡಿದೆ. ಯಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಎ. ದೇವಯ್ಯ ಮತ್ತು ಉಪನ್ಯಾಸಕ ಕೆ.ಎಸ್. ದರ್ಶನ್ ಇವರ ಮಾರ್ಗದರ್ಶನದಲ್ಲಿ 27 ವಿದ್ಯಾರ್ಥಿಗಳು ಸುಮಾರು ಒಂಭತ್ತು ತಿಂಗಳು ಕಾರ್ಯ ನಿರ್ವಹಿಸಿ ಈ ಯಂತ್ರದ ಸಂಪೂರ್ಣ ಕೆಲಸ ಮುಗಿಸಿದ್ದು ವಿದ್ಯಾರ್ಥಿಗಳಾದ ಜಿನ್ಸ್ ಥಾಮಸ್, ಕೆ.ಟಿ. ಗಗನ್ ಮತ್ತು ಕೆ. ಆದಿತ್ಯ ವಿದ್ಯಾರ್ಥಿಗಳ ನೇತೃತ್ವ ವಹಿಸಿದ್ದರು.