ಮಡಿಕೇರಿ, ಮೇ 3: ಕೊಡಗು ಜಿಲ್ಲೆಯಲ್ಲಿ ನಿತ್ಯದ ಕಸವನ್ನು ಸಂಸ್ಕರಣಗೊಳಿಸಿ, ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಪ್ರಕೃತಿಯ ಉಳಿವಿಗೆ ಜನತೆ ತಮ್ಮ ಕೊಡುಗೆ ನೀಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಕೊಡಗು ಜಿ.ಪಂ. ಕಾರ್ಯೋನ್ಮುಖವಾಗಿದೆ.ಈ ನಿಟ್ಟಿನಲ್ಲಿ ಎಲ್ಲ ಗ್ರಾ.ಪಂ. ಮಟ್ಟದಲ್ಲಿ ಅರಿವು ಮೂಡಿಸಲು ಕೈಪಿಡಿ ಹಾಗೂ ಭಿತ್ತಿಪತ್ರಗಳನ್ನು ಹೊರತಂದಿರುವ ಜಿ.ಪಂ. ಆಡಳಿತವು ‘ಎಲ್ಲೆಂದರಲ್ಲಿ ಬಿಸಾಡುವ ಕಸ ಮನುಕುಲಕ್ಕೆ ಉಣಿಸುವ ವಿಷ’ ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ. ಸರಳ ವಿಧಾನದಿಂದ ಕಸವನ್ನು ಗೊಬ್ಬರವನ್ನಾಗಿ ತಯಾರಿಸಿ, ಅದನ್ನು ಮನೆಗಳ ಹೂದೋಟ ಹಾಗೂ ಇತರ ಕೃಷಿಗೆ ಬಳಸುವ ನಿಟ್ಟಿನಲ್ಲಿ ವಿಶೇಷವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಂಡಿದೆ.