ಕುಶಾಲನಗರ, ಮೇ 3: ದೇವಾಲಯಗಳು ಜನರಲ್ಲಿ ನಂಬಿಕೆ, ವಿಶ್ವಾಸ ಮೂಡಿಸುವ ಮೂಲಕ ನೆಮ್ಮದಿ ದೊರಕಿಸುವ ಕೇಂದ್ರಗಳಾಗಿವೆ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸಂತ ಸೆಬಾಸ್ಟಿಯನರ ನೂತನ ದೇವಾಲಯ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಪೂಜಾ ಮಂದಿರಗಳಲ್ಲಿ ಶಾಂತಿ, ಸಮಾಧಾನ ದೊರೆಯುವದರೊಂದಿಗೆ ಧನಾತ್ಮಕ ಚಿಂತನೆಗಳನ್ನು ಹೊಂದಲು ಸಾಧ್ಯ ಎಂದರು. ನಿಕಟಪೂರ್ವ ಧರ್ಮಾಧ್ಯಕ್ಷ ಡಾ. ಥಾಮಸ್ ಅಂಥೋಣಿ ವಾಳಪಿಳ್ಳಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ವಿಶ್ವಾಸ, ಪರಿಶ್ರಮ ಹಾಗೂ ಪ್ರಾರ್ಥನೆ ಮೂಲಕ ಯಶಸ್ಸು ಗಳಿಸಲು ಸಾಧ್ಯ. ಧಾರ್ಮಿಕ ಕೇಂದ್ರಗಳು ಮಾನವನಿಗೆ ಪರಿಪೂರ್ಣತೆ ಗಳಿಸಲು ಪ್ರೇರಕ ಶಕ್ತಿಗಳಾಗಿವೆ ಎಂದರು. ಸುಮಾರು ರೂ. 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ದೇವಾಲಯವನ್ನು ಲೋಕಾರ್ಪಣೆಗೊಳಿಸಿದ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ದೇವಾಲಯದಲ್ಲಿ ದಿವ್ಯ ಬಲಿಪೂಜೆ ನೆರವೇರಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಧರ್ಮ ಇದ್ದಲ್ಲಿ ಭಯಭಕ್ತಿ ಸೃಷ್ಟಿಯಾಗುವದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಧರ್ಮ ಪ್ರಾಂತ್ಯದ ಪ್ರಮುಖರಾದ ಫಾ. ರಾಯಪ್ಪ, ಸಿಸ್ಟರ್ ಜೋವಿತ ಉಪಸ್ಥಿತರಿದ್ದರು.

ನೂತನ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷರು, ಧರ್ಮಗುರುಗಳಾದ ಫಾ. ಮೈಕಲ್ ಮರಿ ಪ್ರಾಸ್ತಾವಿಕ ನುಡಿಗಳಾಡಿದರು. ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್ ದೇವಾಲಯ ನಿರ್ಮಾಣದ ಬಗ್ಗೆ ಸಂಕ್ಷಿಪ್ತ ಮಾಹಿತಿ ಒದಗಿಸಿದರು. ಇದೇ ಸಂದರ್ಭ ದೇವಾಲಯ ನಿರ್ಮಾಣ ಸಂದರ್ಭ ಸೇವೆ ಸಲ್ಲಿಸಿದ ಧರ್ಮಗುರುಗಳಿಗೆ, ದಾನಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು. ದೇವಾಲಯ ನಿರ್ಮಾಣ ಸಮಿತಿಯ ಪ್ರಮುಖರಾದ ಎನ್.ಟಿ. ಜೋಸೆಫ್, ಆಲ್ಬರ್ಟ್ ಡಿಸೋಜ, ಬಿ.ಎಸ್. ಶಾಂತಪ್ಪ, ಐ.ಡಿ. ರಾಯ್ ಮತ್ತು ಸದಸ್ಯರು ಹಾಗೂ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು, ಕನ್ಯಾಸ್ತ್ರೀಯರು ಇದ್ದರು.

ಸವರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ದೇವಾಲಯ ನಿರ್ಮಾಣ ಸಮಿತಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಿಲಿಪ್ ವಾಸ್ ಸ್ವಾಗತಿಸಿದರು, ಶಾಜಿ ಕೆ. ಜಾರ್ಜ್ ವಂದಿಸಿದರು. ಸಂಜೆ ನೂತನ ದೇವಾಲಯದಲ್ಲಿ ಕೃತಜ್ಞತಾ ಪೂಜಾರಾಧನೆ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.