ಮಡಿಕೇರಿ, ಮೇ 3: ಸರ್ಕಾರಗಳು ಜನರ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸಿ ಜನರಿಗೆ ತಲಪಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಲೋಕಾಯುಕ್ತವು ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವದರೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ಆಗುತ್ತಿರುವ ಸಮಸ್ಯೆ, ಲೋಕಾಯುಕ್ತ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪರಸ್ಪರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ. ಅಧಿಕಾರ ವಹಿಸಿಕೊಂಡಾಗಿ ನಿಂದ ಇದುವರೆಗೆ ರಾಜ್ಯದ 13 ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅಧಿಕಾರಿಗಳು ಹೆಚ್ಚಿನ ಪ್ರೋತ್ಸಾಹದಿಂದ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಭರವಸೆ ಇದೆ. ಅಧಿಕಾರಿಗಳ ಶಿಸ್ತಿನಿಂದ ಕಾರ್ಯ ನಿರ್ವಹಿಸಲು ವಿಶ್ವಾಸ ತುಂಬಲಾಗಿದೆ. ತನ್ನ ವಿಶ್ವಾಸ ಈಡೇರದಿದ್ದಲ್ಲಿ ತನಗಿರುವ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಿಕೊಳ್ಳಲು ಹಿಂಜರಿಯಲಾರೆ. ಕೊನೆಯ ಅಸ್ತ್ರವಾಗಿ ತನ್ನ ಅಧಿಕಾರವನ್ನು ಬಳಸಿಕೊಳ್ಳಲಾಗುವದು ಎಂದು ಸ್ಪಷ್ಟ ಮಾತುಗಳನ್ನಾಡಿದರು.

ಎಸಿಬಿಯಿಂದಾಗಿ ಲೋಕಾಯುಕ್ತದ ಅಧಿಕಾರ ಹೆಚ್ಚಳಗೊಂಡಿದೆ. ಲೋಕಾಯುಕ್ತಕ್ಕೆ ಬರುವ ದೂರುಗಳು ಕೂಡ ಅಧಿಕಗೊಂಡಿವೆ. ಎಸಿಬಿ ಮತ್ತು ಲೋಕಾಯುಕ್ತ ಎರಡೂ ಸಂಸ್ಥೆಗಳ ಗುರಿ ಆಡಳಿತದಲ್ಲಿ ಪಾರದರ್ಶಕತೆ ತರುವದಾಗಿದೆ. ಎಸಿಬಿ ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಿದೆ. ಲೋಕಾಯುಕ್ತವು ಇನ್ನಿತರ ದೂರುಗಳ ಬಗ್ಗೆ ಕ್ರಮ ವಹಿಸಲಿದೆ. ಅಧಿಕಾರಿಗಳು ತಪ್ಪು ಮಾಡಿದಾಗ ಕ್ರಮ ಕೈಗೊಳ್ಳುವ ಅಗತ್ಯವಿದೆ. ಧಾಳಿ ಮಾಡುವ ಮೂಲಕ ಅಧಿಕಾರಿಗಳ ಮಾನಹಾನಿ ಮಾಡಿ ಒಳ್ಳೆಯ ಪಾರದರ್ಶಕ ಆಡಳಿತ ಅಸಾಧ್ಯ.

(ಮೊದಲ ಪುಟದಿಂದ) ಅಧಿಕಾರಿಗಳು ತಪ್ಪು ಮಾಡಿದಾಗ ಹಿರಿಯ ಅಧಿಕಾರಿಗಳು ಮಾತುಕತೆ ಮಾಡುವದರಿಂದ ಒಳ್ಳೆಯ ಆಡಳಿತವನ್ನು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಪ್ರಮುಖ ಸ್ಥಾನದಲ್ಲಿದೆ ಎಂಬ ವರದಿಯೇ ತಪ್ಪು ಮಾಹಿತಿಯಿಂದ ಕೂಡಿದೆ. ಇದು ಒಪ್ಪಿಕೊಳ್ಳುವ ವರದಿಯಲ್ಲ. ತಪ್ಪು ಅಭಿಪ್ರಾಯವನ್ನು ಮೂಡಿಸಿ ರಾಜ್ಯದ ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಂದಿಸಬಾರದು. ಭ್ರಷ್ಟಾಚಾರವನ್ನು ಕೊನೆಗಾಣಿಸಲು ಮಾಧ್ಯಮಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಾಯುಕ್ತ ಎಡಿಜಿಪಿ ಪರಶಿವಮೂರ್ತಿ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಎಂ. ಸತೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್, ಡಿಎಫ್‍ಓ ಅರ್ಜುನ್‍ಸೇನ್ ಉಪಸ್ಥಿತರಿದ್ದರು.