ಮಡಿಕೇರಿ, ಮೇ 3: ಪಾಲೆಮಾಡು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಸರ್ಕಾರ ನಿರ್ಗತಿಕರ ಮೇಲಿನ ಮೊಕದ್ದಮೆ ಗಳನ್ನು ಹಿಂಪಡೆದು ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಈ ಹೋರಾಟ ರಾಜ್ಯವ್ಯಾಪಿ ಮುಂದುವರೆ ಯಲಿದೆ ಎಂದು ಬಹುಜನ ಸಮಾಜಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.ಪಾಲೆಮಾಡು ನಿವಾಸಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಎಸ್‍ಪಿ ಹಾಗೂ ವಿವಿಧ ಸಂಘಟನೆಗಳು ಪಾಲೆಮಾಡಿನಿಂದ ಮಡಿಕೇರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಇಂದು ಮಡಿಕೇರಿಗೆ ತಲಪಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮುನಿಯಪ್ಪ ಮಾತನಾಡಿದರು. ಕೊಡಗು ಉಸ್ತುವಾರಿ ಸಚಿವರಾದ ಸೀತಾರಾಂ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬದು ಸಂವಿಧಾನದ ಆಶಯವಾಗಿದೆ. ಇದನ್ನು ಸರ್ಕಾರ ಮನಗಾಣಬೇಕು. ಕೊಡಗಿನಲ್ಲಿ

(ಮೊದಲ ಪುಟದಿಂದ) ಕೂಲಿ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳು ದೊರಕುತ್ತಿಲ್ಲ ಎಂದು ದೂರಿದರು. ಕಂದಾಯ ಸಚಿವರು ದೂರವಾಣಿ ಕರೆ ಮಾಡಿ ಸ್ಮಶಾನ ಜಾಗವನ್ನು ಪಾಲೆಮಾಡು ನಿವಾಸಿಗಳಿಗೆ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರೂ ಕೂಡ ಸಚಿವರ ಸೂಚನೆಯನ್ನು ಪಾಲಿಸದೆ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಟೀಕಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಸಿರಿಮನೆ ನಾಗರಾಜ್ ಮಾತನಾಡಿ, ಸರ್ಕಾರಕ್ಕೆ ಕ್ರಿಕೆಟ್ ಸ್ಟೇಡಿಯಂ ಮೇಲಿರುವ ಕಾಳಜಿ ಬಡಜನರ ಕಷ್ಟದ ಬಗ್ಗೆ ಇಲ್ಲ. ಹಲವಾರು ವರ್ಷಗಳಿಂದ ಪಾಲೆಮಾಡಿನಲ್ಲಿ ನೆಲೆಸಿದ್ದ ಬಡ ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸದ ಜಿಲ್ಲಾಡಳಿತ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಮೂಲಕ ದೌರ್ಜನ್ಯವೆಸಗಿದೆ ಎಂದು ದೂರಿದರು. ಪಿಡಿಓ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಅಂಬೇಡ್ಕರ್ ಜಯಂತಿಯಂದು ಪಿಡಿಒ ಪೊಲೀಸರನ್ನು ಬಳಸಿಕೊಂಡು ಅಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವ ತಾ.ಪಂ., ಜಿ.ಪಂ., ಗ್ರಾ.ಪಂ.ನ ಯಾರೊಬ್ಬ ಜನಪ್ರತಿನಿಧಿಯೂ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.ಪಾಲೆಮಾಡಿನಿಂದ ಆರಂಭಗೊಂಡಿದ್ದ ಪಾದಯಾತ್ರೆ ನಿನ್ನೆ ಮೇಕೇರಿಯಲ್ಲಿ ನಿಂತಿತು. ಬಳಿಕ ಇಂದು ಮೇಕೇರಿಯಿಂದ ಮಡಿಕೇರಿಗೆ ಆಗಮಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಪನಗೊಂಡಿತು. ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರೇಮ್ ಕುಮಾರ್, ದ.ಸಂ.ಸ. (ಭೀಮವಾದ) ಪ್ರಮುಖ ರಾಜು, ಪಾಲೆಮಾಡು ಹೋರಾಟಗಾರ ಕೆ. ಮೊಣ್ಣಪ್ಪ, ನಗರಸಭಾ ಸದಸ್ಯರುಗಳಾದ ಮನ್ಸೂರ್, ಪೀಟರ್ ಮತ್ತಿತರರು ಹಾಜರಿದ್ದರು.