ಸೋಮವಾರಪೇಟೆ, ಮೇ 3: ಸಮೀಪದ ಬೇಳೂರು ಗ್ರಾಮ ಪಂಚಾಯತ್‍ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರೋರ್ವರು ವಾಟ್ಸ್‍ಆಪ್ ಗ್ರೂಪ್‍ನಲ್ಲಿ ನಿಂದನಾತ್ಮಕ ಬರಹಗಳನ್ನು ಹಾಕಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಆಡಳಿತ ಮಂಡಳಿ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ಬೇಳೂರು ಗ್ರಾಮ ಪಂಚಾಯತ್‍ನಿಂದ ಕೈಗೊಳ್ಳಲಾದ ಶೌಚಾಲಯ ನಿರ್ಮಾಣ ಮತ್ತು ಬ್ಯಾಟರಿ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಕಪೋಲಕಲ್ಪಿತ, ಆಧಾರ ರಹಿತ ಬರಹಗಳನ್ನು ಬಜೆಗುಂಡಿಯ ಪ್ರಶಾಂತ್ ಎಂಬವರು ವಾಟ್ಸ್‍ಆಪ್‍ನಲ್ಲಿ ಹಾಕಿದ್ದು, ಇದರಿಂದ ಜನಪ್ರತಿನಿಧಿಗಳಿಗೆ ತೀವ್ರ ಮುಜುಗರವಾಗಿದೆ ಎಂದು ಸದಸ್ಯರುಗಳು ಆರೋಪಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್ ಅವರು, ಬೇಳೂರು ಗ್ರಾ.ಪಂ.ನಲ್ಲಿ 15 ಮಂದಿ ಸದಸ್ಯರಿದ್ದು, ಪಕ್ಷಭೇದ ಮರೆತು ಎಲ್ಲರೂ ಗ್ರಾಮದ ಅಭಿವೃದ್ಧಿಗೆ ದುಡಿಯುತ್ತಿದ್ದೇವೆ ಎಂದರು.

ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ಮಾತನಾಡಿ, ಶೌಚಾಲಯ ನಿರ್ಮಾಣದಲ್ಲಿ ಅನುದಾನ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಬ್ಯಾಟರಿ ಖರೀದಿಯಲ್ಲಿ ನಾಲ್ಕೈದು ಕೊಟೇಷನ್ ಕರೆದು, ನಂತರ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿ ನೂತನ ಬ್ಯಾಟರಿಗಳನ್ನು ಖರೀದಿಸಲಾಗಿದೆ. ಇದರಲ್ಲಿ ಅವ್ಯವಹಾರ ನಡೆಯಲು ಸಾಧ್ಯವೇ ಇಲ್ಲ. ಹೀಗಿದ್ದರೂ ವೃಥಾ ಆರೋಪ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಯೋಗೇಂದ್ರ, ಸುಭದ್ರ, ಕವಿತಾ, ಮಂಜುಳಾ, ಶಶಿಕಲ, ರಾಜು ಅವರುಗಳು ಉಪಸ್ಥಿತರಿದ್ದರು.