ಆಲೂರುಸಿದ್ದಾಪುರ, ಮೇ 4: ರೈತರು ತಮಗಿರುವ ತುಂಡು ಜಮೀನುಗಳಲ್ಲಿಯೂ ಸಹ ಆಧುನಿಕ ಕೃಷಿ ಆಧುನಿಕ ತಂತ್ರಗಾರಿಕೆ ಅಳವಡಿಕೆಯ ಜೊತೆಯಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಕೃಷಿ ಮಾಡಿದರೆ ಹೆಚ್ಚಿನ ಆದಾಯಗಳಿಸಬ ಹುದು ಎಂದು ಸೋಮವಾರಪೇಟೆ ಕೃಷಿ ಸಹಾಯಕ ನಿರ್ದೆಶಕ ಡಾ.ರಾಜಶೇಖರ್ ಅಭಿಪ್ರಾಯ ಪಟ್ಟರು.

ಆಲೂರುಸಿದ್ದಾಪುರ ಸಾರ್ವಜನಿಕ ಸಮೂದಾಯ ಕೇಂದ್ರದಲ್ಲಿ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶನಿವಾರಸಂತೆ ಹೋಬಳಿ 2017-18ನೇ ಸಾಲಿನ ಕೃಷಿ ಅಭಿಯಾನ ಮಾಹಿತಿ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ರೈತರಿಗೆ ಆಧುನಿಕ ಕೃಷಿ ಪದ್ಧತಿ, ಸಾವಯವ ಕೃಷಿ ಪದ್ಧತಿ, ಸರಕಾರ ಮತ್ತು ಕೃಷಿ ಇಲಾಖೆಯಿಂದ ಗ್ರಾಮೀಣ ಭಾಗದ ಎಲ್ಲಾ ವರ್ಗದ ರೈತರಿಗೆ ದೊರೆಯುವ ಸವಲತ್ತುಗಳು, ಮಣ್ಣಿನ ಆರೋಗ್ಯದ ಮಹತ್ವ, ಕೃಷಿಯಲ್ಲಿ ಲಾಭಗಳಿಸುವದು ಇನ್ನೂ ಮುಂತಾದ ಮಾಹಿತಿಗಳನ್ನು ರೈತಾಪಿ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಕೃಷಿ ಇಲಾಖೆ ಹಾಗೂ ಸರಕಾರ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಪ್ರತಿ ವರ್ಷ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು. ರೈತರು ತಮಗಿರುವ ತುಂಡು ಜಮೀನುಗಳಲ್ಲಿ ಪ್ರಾಮಾಣಿಕವಾಗಿ, ವೈಜ್ಞಾನಿಕವಾಗಿ ವಾತಾವರಣಕ್ಕೆ ಅನ್ವಯವಾಗುವಂತಹ ಬೆಳೆ ಬೆಳೆದರೆ ತನ್ನ ತುಂಡು ಜಮೀನಿನಲ್ಲೂ ಹೆಚ್ಚಿನ ಲಾಭಗಳಿಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯೆ ಸರೋಜಮ್ಮ ರೈತರು ಅನ್ನದಾತರು, ಸರಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ, ಪ್ರತಿಯೊಬ್ಬ ಬಡ ವರ್ಗದ ರೈತರಿಗೆ ಸರಕಾರ ಮತ್ತು ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳು ನೇರವಾಗಿ ತಲುಪುವಂತಾಗಬೇಕು, ಅದೆ ರೀತಿಯಲ್ಲಿ ರೈತರು ಸಹ ಹತಾಶ ರಾಗದೆ ಕೃಷಿಕ ವೃತ್ತಿಯಲ್ಲಿ ಹೆಚ್ಚಿನ ಆಸಕ್ತಿವಹಿಸಬೇಕು, ರೈತರು ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಕೃಷಿ ವಿಜ್ಞಾನಿಗಳು, ತೋಟಗಾರಿಕೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ನೀಡುವ ಮಾಹಿತಿ ಯನ್ನು ಪಡೆದುಕೊಂಡು ಕೃಷಿಯಲ್ಲಿ ಅವುಗಳನ್ನು ಅನುಸರಿಸಿಕೊಂಡು ವ್ಯವಸಾಯ ಮಾಡಿಕೊಂಡು ಉತ್ತಮ ಕೃಷಿಕರಾಗುವಂತೆ ಸಲಹೆ ನೀಡಿದರು.

ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ಮಾತನಾಡಿ, ತಾಲೂಕಿನ ಆಲೂರುಸಿದ್ದಾಪುರ ಮುಂತಾದ ವ್ಯಾಪ್ತಿಗಳಲ್ಲಿ ಪ್ರತಿವರ್ಷವೂ ಕಡಿಮೆ ಮಳೆಯಾಗುವ ಪ್ರದೇಶಗಳಾಗಿವೆ ಈ ಭಾಗದಲ್ಲಿ ಕರೆಗಳಲ್ಲಿ ಒಂದು ಹನಿ ನೀರಿಲ್ಲ, ಈ ನಿಟ್ಟಿನಲ್ಲಿ ಸರಕಾರ ಈ ಭಾಗದಲ್ಲಿ ಕೆರೆಗಳ ಹೂಳೆತ್ತಬೇಕಾಗಿದೆ, ಕೃಷಿ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಒಂದೆ ಅವಲಂಭಿತ ಬೆಳೆ ಬೆಳೆಯುತ್ತಾರೆ ಇದರ ಬದಲಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಬೇಕು, ಜಾನುವಾರು ಮತ್ತು ಹೈನುಗಾರಿಕೆಯನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಲೀಲಾವತಿ ಮಹೇಶ್, ಶನಿವಾರಸಂತೆ ಎಪಿಎಂಸಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಆಲೂರುಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ವೀಣ ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಕೃಷಿ ಸಂಪರ್ಕಧಿಕಾರಿ ಮಂಜುನಾಥ್, ಪ್ರಮುಖ ಎಚ್.ಎಸ್.ಸುಂದರೇಶ್, ಆರ್‍ಎಂಸಿ ಸದಸ್ಯ ವಿಜಯ್, ಕೆಂಪರಾಜ್ ಮುಂತಾದವರು ಇದ್ದರು.

ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿಯ ಸಿ.ಸಿ.ಆರ್.ಐ ತೋಟ ಗಾರಿಕೆ ವಿಜ್ಞಾನಿ ಡಾ.ಮುರುಳಿ, ಕೀಟ ಶಾಸ್ತ್ರ ವಿಜ್ಞಾನಿ ಡಾ. ವೆಂಕಟರಮಣಪ್ಪ ಹಾಗೂ ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಮಾಹಿತಿ ನೀಡಿದರು. ಕಾರ್ಯಕ್ರಮ ದಲ್ಲಿ ರೈತರು ಮತ್ತು ಮಹಿಳಾ ರೈತರು ಭಾಗವಹಿಸಿದ್ದರು.

-ಚಿತ್ರ , ವರದಿ ದಿನೇಶ್ ಮಾಲಂಬಿ