ಸಿದ್ದಾಪುರ, ಮೇ 4: ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ತೆರವುಗೊಳಿಸಿದ ಜಾಗದಲ್ಲಿ ಕಳೆದೆರಡು ದಿನಗಳಿಂದ ಮತ್ತೆ ಆದಿವಾಸಿಗಳು ಗುಡಿಸಲು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಬುಧವಾರದಂದು 100 ಗುಡಿಸಿಲು ತಲೆ ಎತ್ತಿದ್ದವು. ಗುರುವಾರ ಬೆಳಗ್ಗಿನ ಜಾವದವರೆಗೂ ಒಟ್ಟು 280 ಕ್ಕೂ ಅಧಿಕ ಗುಡಿಸಲುಗಳು ನಿರ್ಮಾಣವಾಗಿದ್ದು, ಆದಿವಾಸಿಗಳು ಗುಡಿಸಲುಗಳಲ್ಲಿ ಆಹಾರ ತಯಾರಿಸಿ ಕೆಲವರು ರಾತ್ರಿ ಪೂರ್ತಿ ಜಾಗರಣೆಯಲ್ಲೇ ಕಾಲ ಕಳೆದರು. ಕೆಲವರು ಜಿಲ್ಲಾಡಳಿತ ಗುರುತಿಸಿದ ಬಸವನಳ್ಳಿಗೆ ತೆರಳಿ ತಮ್ಮ ಚಿತ್ರವನ್ನು ತೆಗೆಸಿಕೊಂಡು ಅಲ್ಲಿ ವಾಸ್ತವ್ಯ ಹೂಡಲು ತಯಾರಿಯಲ್ಲಿದ್ದಾರೆ. ಮುಂದಿನ ವಾರ ಬಸವನಳ್ಳಿಗೆ ತಮ್ಮ ಸಂಸಾರದೊಂದಿಗೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವ ಬಗ್ಗೆ ಕೆಲವು ಆದಿವಾಸಿಗಳು ತಿಳಿಸಿದ್ದಾರೆ. ಆದರೆ ಆದಿವಾಸಿಗಳಲ್ಲಿ ಎರಡು ಗುಂಪುಗಳಾಗಿ ಒಡಕು ಮೂಡಿದ್ದು, ಬಲ ಪ್ರದರ್ಶಿಸುವ ಸಾಧ್ಯತೆ ಇದೆ. ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ಮತ್ತೊಮ್ಮೆ ಗುಡಿಸಲು ನಿರ್ಮಾಣ ಮಾಡಿರುವ ಆದಿವಾಸಿಗಳಿಗೆ ಅಲ್ಲಿಂದ ತೆರಳುವಂತೆ ಸೂಚನೆಯನ್ನು ಈಗಾಗಲೇ ನೀಡಿದೆ. ಆದರೂ ಹಠ ಹಿಡಿದು

(ಮೊದಲ ಪುಟದಿಂದ) ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಚರ್ಚೆ ನಡೆಸಿ ಜಾಗ ನೀಡುವರೆಗೂ ಇಲ್ಲಿಂದ ಬಿಟ್ಟು ಹೋಗುವದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ಆದಿವಾಸಿಗಳು ತಮ್ಮ ಪುಟ್ಟ ಮಕ್ಕಳೊಂದಿಗೆ ಶಾಶ್ವತ ಸೂರಿಗಾಗಿ ಚಡಪಡಿಸುತ್ತಾ ಶಾಶ್ವತ ನೆಲೆಯ ನಿರೀಕ್ಷೆಯಲ್ಲಿದ್ದಾರೆ. ಯಾರ ಮಾತನ್ನು ಕೇಳುವದು ಬಿಡುವದು ಎಂಬ ಚಿಂತೆಯಲ್ಲಿದ್ದಾರೆ.

ಒಂದೆರೆಡು ದಿನಗಳಲ್ಲಿ ತೆರವು ?: ಅರಣ್ಯ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡಿರುವ ನಿರಾಶ್ರಿತರ ಗುಡಿಸಲುಗಳನ್ನು ಮುಂದಿನ ಎರಡು ದಿನಗಳಲ್ಲಿ ತೆರವುಗೊಳಿಸುವ ಬಗ್ಗೆ ಸಂಬಂಧಿಸಿದ ಇಲಾಖೆಗಳು ಸಿದ್ಧತೆ ನಡೆಸಿವೆ ಎಂದು ತಿಳಿದುಬಂದಿದೆ.

ಪೊಲೀಸರ ಕಾವಲು: ಪೊಲೀಸರು ರಾತ್ರಿ ಹಗಲು ನಿದ್ದೆ ಬಿಟ್ಟು ದಿಡ್ಡಳ್ಳಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅರಣ್ಯ ಇಲಾಖೆ ಯವರು ಅರಣ್ಯ ಪ್ರದೇಶದಲ್ಲಿ ಗುಡಿಸಲುಗಳನ್ನು ನಿರ್ಮಿಸಿರುವ ಪ್ರಾರಂಭದಲ್ಲೇ ತೆರವುಗೊಳಿಸಿದ್ದರೆ, ಈ ರೀತಿ ಆಗುತ್ತಿರಲಿಲ್ಲ ಈಗ ಸಮಸ್ಯೆ ಬಿಗಡಾಯಿಸಿ ಸರ್ಕಾರದ ಹಣ ಪೋಲಾಗುತ್ತಿದೆ. ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮರವೇರಿ ಪ್ರತಿಭಟನೆ !

ಈ ಹಿಂದೆ ದಿಡ್ಡಳ್ಳಿಯಲ್ಲಿ ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸಿರು ವದರ ವಿರುದ್ಧ ಬೆತ್ತಲೆ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದ ಗಿರಿಜನ ಮುಖಂಡೆ ಜೆ.ಕೆ. ಮುತ್ತಮ್ಮ ಇದೀಗ ದಿಡ್ಡಳ್ಳಿಯಲ್ಲೆ ನಿವೇಶನಕ್ಕೆ ಒತ್ತಾಯಿಸಿ ಹಾಗೂ ಅಲ್ಲಿಂದ ತೆರವುಗೊಳಿಸಬಾರದೆಂದು ಮರವನ್ನು ಏರಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.

ತಮ್ಮನ್ನು ತೆರವುಗೊಳಿಸಿದ ಅರಣ್ಯದಲ್ಲೆ ಮತ್ತೆ ಗುಡಿಸಲುಗಳನ್ನು ನಿರ್ಮಿಸಿರುವ ಅದಿವಾಸಿಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಮುತ್ತಮ್ಮ ಇಂದು ಬೆಳ್ಳಿಗೆ 5.30ಕ್ಕೆ ಸುಮಾರು 40 ಅಡಿ ಮರವನ್ನು ಏರಿ ಪುರುಷರು ನಾಚಿಸುವಂತಹ ರೀತಿಯಲ್ಲಿ ಸುಮಾರು 5 ಗಂಟೆಗಳ ಕಾಲ ಏನನ್ನೂ ಸೇವಿಸದೆ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ನಂತರ ಕಂದಾಯ ಸಚಿವರನ್ನು ದೂರವಾಣಿ ಮೂಲಕ ಮುತ್ತಮ್ಮ ಸಂಪರ್ಕಿಸಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವದಾಗಿ ಸಚಿವರ ಭರವಸೆಯ ಹಿನ್ನಲೆಯಲ್ಲಿ ಮರದಿಂದ ಇಳಿದು ಪ್ರತಿಭಟನೆಯನ್ನು ಕೈ ಬಿಟ್ಟರು. ಸರ್ಕಾರವು ದಿಡ್ಡಳ್ಳಿಯಲ್ಲೆ ತಮಗೆ 5 ಸೆಂಟು ಜಾಗ ನೀಡಿ ಮೂಲಭೂತ ಸೌಕರ್ಯಗಳ ನ್ನೊಳಗೊಂಡ ಮನೆ ನಿರ್ಮಿಸಿ ಕೊಡಬೇಕು. ಇಲ್ಲದಿದ್ದಲ್ಲಿ ಸರ್ಕಾರ ಗುರುತಿಸಿದ ಜಾಗಕ್ಕೆ ತೆರಳಬೇಕೆಂದರೆ ವಸತಿ ಜೊತೆಗೆ 2 ಏಕ್ರೆ ಜಾಗವನ್ನು ನೀಡಬೇಕು. ಇಲ್ಲದಿದ್ದಲ್ಲಿ ಈ ಜಾಗ ವನ್ನು ಬಿಟ್ಟು ಎಲ್ಲಿಗೂ ಕದಲುವದಿಲ್ಲ ಎಂದು ಮುತ್ತಮ್ಮ ಘೋಷಿಸಿದರು.

ರಾಜಾರಾವ್ ಭೇಟಿ

ಬಿ.ಜೆ.ಪಿ. ಪರಿಶಿಷ್ಟ ವರ್ಗಗಳ ಜಿಲ್ಲಾಧ್ಯಕ್ಷ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ರಾಜಾರಾವ್ ಭೇಟಿ ನೀಡಿ ಆದಿವಾಸಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು .

ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಾನು ಆದಿವಾಸಿಗಳ ಹೋರಾಟಕ್ಕೆ ಮೊದಲಿನಿಂದಲೂ ಬೆಂಬಲ ವ್ಯಕ್ತಪಡಿಸಿ, ಹೋರಾಟದಲ್ಲಿ ಪಾಲ್ಗೊಂಡಿದ್ದೆ. ವಸತಿ ವಂಚಿತರ ಹೋರಾಟ ಸಮಿತಿ ಮುಗ್ಧ ಆದಿವಾಸಿಗಳ ಹೋರಾಟವನ್ನು ದಿಕ್ಕು ತಪ್ಪಿಸುತ್ತಿರುವದನ್ನು ತಿಳಿದ ನಂತರ ಮನನೊಂದು ಇಲ್ಲಿಗೆ ಆಗಮಿಸಲಿಲ್ಲ. ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ಆದಿವಾಸಿಗಳು ಅನ್ಯೂನ್ಯತೆಯಿಂದ ಇದ್ದಾರೆ ಆದರೆ ವಸತಿ ವಂಚಿತರ ಹೋರಾಟ ಸಮಿತಿಯವರು ಇವರಿಬ್ಬರ ಮಧ್ಯೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

- ಎ.ಎನ್. ವಾಸು