ಭಾಗಮಂಡಲ/ ಕರಿಕೆ, ಮೇ 4: ಮನೆಯೊಂದರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿರುವ ಘಟನೆ ನಡೆದಿದೆ.

ಇಲ್ಲಿಗೆ ಸಮೀಪದ ಕೋರಂಗಾಲ ಗ್ರಾಮದಲ್ಲಿರುವ ಮನೆಯ ಕಿಟಕಿಗೆ ಅಪರಿಚಿತರು ರಾತ್ರಿ ವೇಳೆಯಲ್ಲಿ ಗುಂಡು ಹಾರಿಸಿದ್ದಾರೆ. ಕಿಟಕಿ ಗಾಜು ಪುಡಿಯಾಗಿದ್ದು, ಮನೆಯೊಳಗೆ ಗುಂಡುಗಳು ಹೊಕ್ಕಿವೆ. ಆದರೆ ಯಾವದೇ ಅಪಾಯ ಸಂಭವಿಸಿಲ್ಲ. ಕರಿಕೆ ಗ್ರಾಮದ ಕುದುಪಜೆ ಪುರುಷೋತ್ತಮ ಎಂಬವರಿಗೆ ಸೇರಿದ ಮನೆಯನ್ನು ಇತ್ತೀಚೆಗೆ ಕೇರಳದ ಸ್ವೀಫನ್ ಜೋಸೆಫ್ ಎಂಬವರು ಖರೀದಿಸಿದ್ದು, ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಮನೆಯೊಳಗೆ ಕಾರ್ಮಿಕರು ಮಲಗಿದ್ದರು. ಈ ಸಂದರ್ಭದಲ್ಲಿ ಯಾರೋ ಗುಂಡು ಹಾರಿಸಿದ್ದು, ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.