ಮಡಿಕೇರಿ, ಮೇ 4: ಸಿದ್ದಾಪುರದ ನೆಲ್ಲಿಹುದಿಕೇರಿಯಲ್ಲಿ ತಾ. 5 ರಂದು (ಇಂದು) ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳಬಹುದೆಂದು ಸಂಘಟಕರು ಸುಳಿವು ನೀಡಿದ್ದು, ಪೊಲೀಸ್ ಇಲಾಖೆಯಿಂದ ವ್ಯಾಪಕ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರನ್ನು ‘ಶಕ್ತಿ’ ಮಾಹಿತಿ ಬಯಸಿದಾಗ, ಈಗಾಗಲೇ ಮುಂಜಾಗ್ರತಾ ಕ್ರಮಕೈಗೊಂಡು ಸಂಜೆ ಸಮಾಜೋತ್ಸವ ಪ್ರದೇಶದಲ್ಲಿ ಪೊಲೀಸರು ಪಥ ಸಂಚಲನ ನಡೆಸುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ ಎಂದು ವಿವರಿಸಿದರು.

ಒಂದು ಸಾವಿರಕ್ಕೂ ಅಧಿಕ ನಿಯೋಜನೆಹಿಂದೂ ಸಮಾಜೋತ್ಸವ ವೇಳೆ ಯಾವದೇ ಅಹಿತಕರ ಘಟನೆ ಸಂಭವಿಸದಂತೆ ಆಯಾಕಟ್ಟಿನಲ್ಲಿ ವಿಶೇಷ ಭದ್ರತೆ ಕಲ್ಪಿಸಿದ್ದು, ಐವರು ಡಿವೈಎಸ್ಪಿಗಳು, 14 ಇನ್ಸ್‍ಪೆಕ್ಟರ್‍ಗಳು, 23 ಸಬ್‍ಇನ್ಸ್‍ಪೆಕ್ಟರ್‍ಗಳು, 49 ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿಯಿತ್ತರು.

ಅಲ್ಲದೆ 407 ಪೊಲೀಸ್ ಸಿಬ್ಬಂದಿ, 30 ಮಹಿಳಾ ಪೊಲೀಸರು, 150 ಗೃಹರಕ್ಷಕ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ಅಣಿಗೊಳಿಸಲಾಗಿದೆ ಎಂದು ಅಧೀಕ್ಷಕರು ವಿವರಣೆ ನೀಡಿದರು. ಇದರೊಂದಿಗೆ ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸರ 10 ತುಕಡಿಗಳು ಹಾಗೂ ಕರ್ನಾಟಕ ಮೀಸಲು ಪೊಲೀಸ್ ಪಡೆಯ 10 ತುಕಡಿಗಳು ಸಮಾಜೋತ್ಸವ ಸಂಬಂಧ ಕಾರ್ಯನಿರ್ವಹಿಸಲಿರುವದಾಗಿ ಅವರು ವಿವರಿಸಿದರು. ಮಾತ್ರವಲ್ಲದೆ ಕ್ಷಿಪ್ರ ಕಾರ್ಯ ಪಡೆಯ (ರ್ಯಾಪಿಡ್ ಆ್ಯಕ್ಷನ್ ಫೋರ್ಸ್) 3 ತಂಡಗಳು ಮುನ್ನೆಚ್ಚರಿಕೆ ವಹಿಸಲಿದ್ದು, ಕೊಡಗಿನ ಜನತೆ ಶಾಂತಿ-ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಲು ಪೊಲೀಸ್ ಅಧೀಕ್ಷಕರು ಕೋರಿದರು.

(ಮೊದಲ ಪುಟದಿಂದ)

ಸಂಘಟಕರ ಹೇಳಿಕೆ

ಸಮಾಜೋತ್ಸವ ಉಸ್ತುವಾರಿಯಲ್ಲಿರುವ ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ ಹಾಗೂ ಭಜರಂಗದಳ ಪ್ರಮುಖ ಕೆ.ಹೆಚ್. ಚೇತನ್ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿ, ಜಿಲ್ಲೆಯ ಎಲ್ಲೆಡೆಯಿಂದ ಸುಮಾರು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ವ್ಯಕ್ತಪಡಿಸಿದರು.

ಬೆಳಿಗ್ಗೆ 10 ಗಂಟೆಗೆ ಸಿದ್ದಾಪುರದ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಸಂತರು ಗೋಪೂಜೆಯೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಿದ್ದು, ಶೋಭಾಯಾತ್ರೆಯಲ್ಲಿ ಡೊಳ್ಳು ಕುಣಿತ, ಸಿಂಗಾರಿ ಮೇಳ, ಕೊಡಗಿನ ವಾಲಗ, ಕೇರಳದ ಚಂಡೆ ವಾದ್ಯದಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಲಿದ್ದು, ಶ್ರೀರಾಮ, ಹನುಮ ಸೇರಿದಂತೆ ಹತ್ತಾರು ಸ್ತಬ್ಧ ಚಿತ್ರಗಳು ಇರಲಿವೆಯೆಂದು ವಿವರಿಸಿದರು.

ನೆಲ್ಲಿಹುದಿಕೇರಿ ಕಾವೇರಿ ತಟದ ಗದ್ದೆ ಬಯಲಿನ ವಿಶಾಲ ಮೈದಾನಕ್ಕೆ ವಿ.ಹಿಂ.ಪ. ವರಿಷ್ಠ ದಿ. ಅಶೋಕ್ ಸಿಂಘಾಲ್ ಸಭಾಂಗಣ ಹಾಗೂ ಹುತಾತ್ಮ ಡಿ.ಎಸ್. ಕುಟ್ಟಪ್ಪ ವೇದಿಕೆಯಲ್ಲಿ ಸಭಾಕಾರ್ಯಕ್ರಮ 11.30ಕ್ಕೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಯೋಧ್ಯೆಯ ರಾಮಮಂದಿರ ಹಿನ್ನೆಲೆಯ ವೇದಿಕೆಯೊಂದಿಗೆ, ವಿ.ಹಿಂ.ಪ. ಅಂತರ್ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಭಾಷಣ ಮಾಡಲಿದ್ದು, ಆರೆಸ್ಸೆಸ್ ಮುಖಂಡ ಮಚ್ಚಾರಂಡ ಮಣಿ ಕಾರ್ಯಪ್ಪ, ವಿ.ಹಿಂ.ಪ. ರಾಜ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ಭಜರಂಗದಳ ದಕ್ಷಿಣ ಭಾರತ ಸಂಯೋಜಕ ಸೂರ್ಯ ನಾರಾಯಣ ಸೇರಿದಂತೆ ಪ್ರಾಂತ, ವಿಭಾಗ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು. -ವಾಸು, ಸುಧಿ