ಮಡಿಕೇರಿ, ಮೇ 6: ನಾಪೋಕ್ಲು ಹೋಬಳಿಯ ಕಡಿಯತ್ತೂರು ಬಳಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವದು ಕಂಡು ಬಂದ ಹಿನ್ನೆಲೆ ದಿಢೀರ್ ಧಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧಾಳಿ ಮಾಡಿ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಜಿ.ರೇಷ್ಮಾ ತಿಳಿಸಿದ್ದಾರೆ.

ಅಕ್ರಮವಾಗಿ ಮರಳು ತೆಗೆಯಲು ಬಳಸಿದ್ದ 1 ಕಬ್ಬಿಣದ ಬೋಟ್ ಮತ್ತು ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ 2016-17ನೇ ಸಾಲಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಸಂಬಂಧಿಸಿದಂತೆ ಸುಮಾರು 7 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ 29 ಕಡೆ ಮರಳು ನಿಕ್ಷೇಪ ಬ್ಲಾಕ್‍ಗಳನ್ನು ಗುರುತಿಸಲಾಗಿದ್ದು, ಆರ್ಥಿಕ ಬಿಡ್ ಆಗಬೇಕಿದೆ.

ಜಿಲ್ಲೆಯ ಬಲ್ಯಮಂಡೂರು, ಕಟ್ಟೆಮಾಡು, ನೆಲ್ಯಹುದಿಕೇರಿ, ಕೆಳಕೊಡ್ಲಿ, ಕಡಿಯತ್ತೂರು, ಮಲಗನಹಳ್ಳಿ, ನಾಪೋಕ್ಲು, ಬೇತು, ಹೊಸಹಳ್ಳಿ, ಹಾಲುಗುಂದ, ಬಿ.ಬಾಡಗ, ಗರಗಂದೂರು, ಕಟ್ಟೇಪುರ, ಹಂಪಾಪುರ, ಬಲ್ಲಮಾವಟಿ, ಎಮ್ಮೆಮಾಡು, ಕೊಟ್ಟಗೇರಿ, ಶಿರಂಗಾಲ, ಜಂಬೂರು, ಶಾಂತಪುರ, ಗುಹ್ಯ, ಕೋತೂರು ಇಲ್ಲಿ ಗುರುತಿಸಲಾಗಿದೆ.

ಅಧಿಸೂಚನೆಯಲ್ಲಿ ಗುರುತಿಸಿದ ಮರಳು ನಿಕ್ಷೇಪದ ಬ್ಲಾಕ್‍ಗಳನ್ನು ಉಲ್ಲೇಖಿತ ನಿಯಮಗಳಿಗನುಸಾರ ಹಾಗೂ ಕ್ವಾರಿ ಪ್ಲಾನ್ ಅನುಸಾರ ಸಂಬಂಧಪಟ್ಟ ಸಾರ್ವಜನಿಕರ ಉಪಯೋಗಕ್ಕಾಗಿ ಮರಳು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವದು. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮ 1994ರ ತಿದ್ದುಪಡಿ ಅಧಿನಿಯಮ ದಿನಾಂಕ:-12-08-2016 ರ 31 (ಎಸ್) 31 (ಟಿ) ನಿಯಮಗಳು ಅನ್ವಯವಾಗುತ್ತವೆ ಎಂದು ತಿಳಿಸಿದ್ದಾರೆ.