ಮಡಿಕೇರಿ, ಮೇ 7: ಟಾಸ್ ಗೆದ್ದು ‘ಫೀಲ್ಡಿಂಗ್' ಆಯ್ಕೆ ಮಾಡಿದ ಪರ್ಲಕೋಟಿ, ಆರಂಭದಲ್ಲೇ ಎಡವಿದ ತಳೂರು ತಂಡಕ್ಕೆ ವರವಾದ ವಿಕ್ಕಿ..., ಪಂದ್ಯದಲ್ಲಿ ನಿರ್ಣಾಯಕವಾದ 5ನೇ ಓವರ್.., ತಳೂರಿಗೆ ಒಲಿದ ಚಾಂಪಿಯನ್ ಪಟ್ಟ, ಪರ್ಲಕೋಟಿ ಕನಸು ಭಗ್ನ...ಇದು ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿ ಸಲಾಗಿದ್ದ ಗೌಡ ಕುಟುಂಬಗಳ ನಡುವಿನ ಪೈಕೇರ ಕಪ್ ಕ್ರಿಕೆಟ್ ಫೈನಲ್ ಪಂದ್ಯಾಟದ ‘ಹೈಲೈಟ್ಸ್'.

ಇಂದು ಬೆಳಿಗ್ಗೆ ನಡೆದ ಅಂತಿಮ ಪಂದ್ಯಾಟವನ್ನು ದಾನಿ ಕೋಚನ ಪ್ರವೀಣ್ ಉದ್ಘಾಟಿಸಿದರು. ಟಾಸ್ ಚಿಮ್ಮುವಿಕೆಯಲ್ಲಿ ಗೆದ್ದ ಪರ್ಲಕೋಟಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ತಳೂರು ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಬ್ಯಾಟಿಂಗ್‍ಗೆ ಇಳಿದ ತಳೂರು ತಂಡ 3ನೇ ಓವರ್ ವೇಳೆಗೆ 2 ವಿಕೆಟ್ ಕಳೆದುಕೊಂಡು 4ನೇ ಓವರ್ ಮುಕ್ತಾಯಕ್ಕೆ 30 ರನ್ ಗಳಿಸಿತ್ತು.

ಆದರೆ 5ನೇ ಓವರ್ ಮಾತ್ರ ಪರ್ಲಕೋಟಿ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಪರ್ಲಕೋಟಿ ಪರ 5ನೇ ಓವರ್ ಮಾಡಿದ ದರ್ಶನ್ ಅವರ ಎಸೆತಗಳನ್ನು ತಳೂರು ತಂಡದ ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿದಿದ್ದ ವಿಕ್ಕಿ ಮನಬಂದಂತೆ ದಂಡಿಸಿದರು. ನಾಲ್ಕು ಸಿಕ್ಸರ್, 1 ಬೌಂಡರಿ ಬಾರಿಸುವ ಮೂಲಕ ಒಂದೇ ಓವರ್‍ನಲ್ಲಿ 30 ರನ್ ದಾಖಲಾಯಿತು. ಆ ಮೂಲಕ ಆರಂಭದಿಂದ ಚಾಕಚಕ್ಯತೆಯ ಆಟ ಪ್ರದರ್ಶಿಸುತ್ತಿದ್ದ ಪರ್ಲಕೋಟಿಯ ವೇಗಕ್ಕೆ ವಿಕ್ಕಿ ಬ್ರೇಕ್ ಹಾಕಿದರು. ಆಕರ್ಷಕ ಹೊಡೆತಗಳೊಂದಿಗೆ 42 ರನ್ ಕಲೆಹಾಕಿದ ವಿಕ್ಕಿಯ ಆಟ ತಳೂರು ತಂಡಕ್ಕೆ ವರವಾಗಿ ಪರಿಣಮಿಸಿತು. ಹೊಡಿ ಬಡಿ ಆಟ ಮುಂದುವರೆಸಿದ್ದ ವಿಕ್ಕಿ ಪರ್ಲಕೋಟಿ ಲಕ್ಷಿತ್ ಎಸೆತದಲ್ಲಿ ದಯಾ ಅವರಿಗೆ ಕ್ಯಾಚ್ ನೀಡಿ

(ಮೊದಲ ಪುಟದಿಂದ) ಫೆವಿಲಿಯನ್‍ಗೆ ಮರಳಿದರು. ಈ ಸಂದರ್ಭ ಪರ್ಲಕೋಟಿ ತಂಡ ನಿಟ್ಟುಸಿರು ಬಿಟ್ಟಿತಾದರೂ ತಳೂರು ತಂಡದ ಮೊತ್ತ 55ರ ಗಡಿ ದಾಟಿತ್ತು. ವಿಕ್ಕಿ ಮೊದಲ ಎರಡು ಸಿಕ್ಸ್ ಬಾರಿಸಿದ ನಂತರದ ಎಸೆತದಲ್ಲಿ ವಿಕ್ಕಿಯ ಹೊಡೆತವೊಂದು ಕ್ಯಾಚ್ ಆಗುವ ಸಂಭವವಿತ್ತಾದರೂ, ಆ ಅವಕಾಶವನ್ನು ಕೈಚೆಲ್ಲಿ ಪರ್ಲಕೋಟಿ ನೀಡಿದ ಜೀವದಾನವನ್ನು ಸದುಪಯೋಗಪಡಿಸಿಕೊಂಡ ವಿಕ್ಕಿ ಕೆಲವೇ ಕೆಲವು ಎಸೆತಗಳಲ್ಲಿ ಎದುರಾಳಿ ತಂಡದ ಬೆವರಿಳಿಸಿದರು.

ವಿಕ್ಕಿ ಹೊರತುಪಡಿಸಿದಂತೆ ಜಿತು (0), ಅಣ್ಣಯ್ಯ (2), ವಿಜು (19), ಮನೋಜ್ (1), ಪ್ರಸಾದ್ (1), ಪವನ್ (4), ಗಗನ್ (2) ರನ್ ಗಳಿಸಿದರು. ಪರ್ಲಕೋಟಿ ಲಕ್ಷಿತ್ ಪರ್ಲಕೋಟಿ ಕೀರ್ತನ್ ತಲಾ 2 ವಿಕೆಟ್, ದರ್ಶನ್, ಸಜನ್ ತಲಾ ಒಂದೊಂದು ವಿಕೆಟ್ ಪಡೆದರು. ಒಂದು ರನ್ನೌಟ್. ಒಟ್ಟು 7 ವಿಕೆಟ್ ಕಳೆದುಕೊಂಡ ತಳೂರು 10 ಓವರ್‍ಗೆ 90 ರನ್‍ಗಳ ಟಾರ್ಗೆಟ್ ನೀಡಿತು.

ಉತ್ತರವಾಗಿ ಆಡಿದ ಪರ್ಲಕೋಟಿ, ಆರಂಭದಲ್ಲಿ ಉತ್ತಮ ಆಟವಾಡುತ್ತಾ ಬಂತಾದರೂ 4ನೇ ಓವರ್‍ನಲ್ಲಿ 28 ರನ್‍ಗೆ ಮೊದಲ ವಿಕೆಟ್ ಪತನವಾಯಿತು. ಆರಂಭಿಕ ಆಟಗಾರ ದರ್ಶನ್ ಔಟಾದ ಬಳಿಕ ಸಜನ್ ಉತ್ತಮ ಆಟದೊಂದಿಗೆ ಪರ್ಲಕೋಟಿಗೆ ಗೆಲುವಿನ ಭರವಸೆ ಮೂಡಿಸಿದ್ದರಾದರೂ ತಳೂರಿಗೆ ವರವಾಗಿದ್ದ ‘5ನೇ' ಓವರ್ ಪರ್ಲಕೋಟಿಗೆ ಮುಳುವಾಯಿತು.

ಐದನೇ ಓವರ್‍ನಲ್ಲಿ ಪವನ್ ಎಸೆತಕ್ಕೆ ಪರ್ಲಕೋಟಿಯ ಭರವಸೆಯ ಬ್ಯಾಟ್ಸ್‍ಮೆನ್ ಸಜನ್ (17) ಔಟಾಗುವ ಮೂಲಕ ಪರ್ಲಕೋಟಿ ಆರಂಭಿಕ ಆಘಾತ ಎದುರಿಸಬೇಕಾಯಿತು. ನಂತರ ಬಂದ ಬ್ಯಾಟ್ಸ್‍ಮೆನ್‍ಗಳ್ಯಾರು ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ತಳೂರು ಆಟಗಾರರು ಪ್ರತಿ ಓವರ್‍ನಲ್ಲೂ ಜಾಗ್ರತೆ ವಹಿಸಿ ಆಟವಾಡಿ ಪರ್ಲಕೋಟಿಯ ಗೆಲುವಿನ ಕನಸಿಗೆ ತಣ್ಣೀರೆರಚಿದರು. ಕೊನೆಯ ಓವರ್‍ನಲ್ಲಿ 20 ರನ್‍ಗಳ ಅವಶ್ಯಕತೆಯಿತ್ತಾದರೂ ಚಾಕಚಕ್ಯತೆಯಿಂದ ಕೊನೆಯ ಓವರ್ ಎಸೆದ ತಳೂರು ವಿಜು ಕೇವಲ 4 ರನ್ ಮಾತ್ರ ನೀಡಿದರು. ಆ ಮೂಲಕ ಪರ್ಲಕೋಟಿ 16 ರನ್‍ಗಳ ಸೋಲು ಕಂಡಿತು. 8 ವಿಕೆಟ್ ಕಳೆದುಕೊಂಡಿತು.

ಪರ್ಲಕೋಟಿ ಪರ ದರ್ಶನ್ (11), ಸನತ್ (14), ಲಕ್ಷಿತ್ (0), ಸತ್ಯ (9), ರಜಿತ್ (1), ಡಿಜಿತ್ (7), ಕೀರ್ತನ್ (0), ದಯಾ (7), ಇತರೆ ರನ್ ಸೇರಿ ಪರ್ಲಕೋಟಿ 74 ರನ್ ಗಳಿಸಿತು. ತಳೂರು ಪರ ಪ್ರತೀಕ್ (3), ಪವನ್ (1), ಜಿತು (2), ಗಗನ್ (2) ವಿಕೆಟ್ ಪಡೆದರು.

ಪಂದ್ಯಾಟದ ತೀರ್ಪುಗಾರರಾಗಿ ಕೋಚನ ಅನುಪ್, ಪೊಕ್ಕುಳಂಡ್ರ ಮನೋಜ್ ಕಾರ್ಯ ನಿರ್ವಹಿಸಿದರು.

-ಉಜ್ವಲ್ ರಂಜಿತ್.