ಪೊನ್ನಂಪೇಟೆ, ಮಾ. 6: ಎಮ್ಮೆಮಾಡು ಸೂಫಿ ಶಹೀದ್ ಅವರ ಹೆಸರಿನಲ್ಲಿ ವರ್ಷಂಪ್ರತಿ ಜರುಗುವ ಇತಿಹಾಸ ಪ್ರಸಿದ್ಧ ದಕ್ಷಿಣ ಕೊಡಗಿನ ಕುತ್ತುನಾಡು ಉರೂಸ್ ತಾ. 8 ರಂದು (ನಾಳೆ) ಜರುಗಲಿದೆ.

ಬಿ. ಶೆಟ್ಟಿಗೇರಿ ಸಮೀಪದ ಕುತ್ತುನಾಡಿನ ಹೊಳೆ ದಡದಲ್ಲಿರುವ ನೇರ್ಚೆ ಬಿಡಾರದ ಆವರಣದಲ್ಲಿ ಜರುಗಲಿರುವ ಉರೂಸ್ ಕಾರ್ಯಕ್ರಮಕ್ಕೆ ಬೆಳಿಗ್ಗೆ 8 ಗಂಟೆಗೆ ತಕ್ಕ ಮುಖ್ಯಸ್ಥರಾದ ಆಲೀರ ಪಿ. ಚೇಕು ಹಾಜಿ ಮತ್ತು ಕರ್ತುರ ಕೆ. ದೇವಯ್ಯ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಬಳಿಕ ಜರುಗುವ ಸಾಮೂಹಿಕ ಪ್ರಾರ್ಥನೆಗೆ ಎಮ್ಮೆಮಾಡುವಿನ ಮುದರೀಸ್ ಸಯ್ಯದ್ ಮಹಮ್ಮದ್ ಸಾಲಿಂ ಸಖಾಫಿ ನೇತೃತ್ವ ನೀಡಲಿದ್ದಾರೆ. ಆ ನಂತರ ಹಾಲು ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತದೆ. ಬೆಳಿಗ್ಗೆ 10 ಗಂಟೆಗೆ ಜರುಗುವ ಮೌಲಿದ್ ಪಾರಾಯಣ ಕಾರ್ಯಕ್ರಮಕ್ಕೆ ಬೇಗೂರಿನ ಕಲ್ಲಾಯಿ ಜುಮಾ ಮಸೀದಿಯ ಖತೀಬರಾದ ಶೌಕತ್ ಆಲಿ ಸಖಾಫಿ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗರಗಂದೂರಿನ ಮುನೀರ್, ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪನಂದ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.