ಮಡಿಕೇರಿ, ಮೇ 7: ವೀರಾಜಪೇಟೆ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಬಾಳೆಲೆ ಹೋಬಳಿಯೂ ಒಂದಾಗಿದೆ. ನಿಟ್ಟೂರು, ಬಾಳೆಲೆ, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಗಳನ್ನು ಒಳಗೊಂಡಂತೆ ಬಾಳೆಲೆಯಲ್ಲಿ ಕಂದಾಯ ಪರಿವೀಕ್ಷಕರ ಕಚೇರಿ ಇದೆ. ಕೊಟ್ಟಗೇರಿ, ಬಾಳೆಲೆ, ದೇವನೂರು, ಪೊನ್ನಪ್ಪಸಂತೆ, ಮಾಯಮುಡಿಯ ಅರ್ಧಭಾಗ, ನಲ್ಲೂರಿನ ಅರ್ಧಭಾಗ, ಬೆಸಗೂರು ಗ್ರಾಮಗಳನ್ನು ಒಳಗೊಂಡಂತೆ ಬಾಳೆಲೆ ಹೋಬಳಿ ದೊಡ್ಡ ವಿಸ್ತೀರ್ಣವನ್ನೂ ಹೊಂದಿದ್ದು, ಸುಮಾರು 15 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. ಬಾಳೆಲೆ ಪಟ್ಟಣದಲ್ಲಿ ಪ್ರಸ್ತುತ ಇರುವ ಕಂದಾಯ ಕಚೇರಿ ಕಟ್ಟಡ ದುಸ್ಥಿತಿಯಲ್ಲಿದೆ.

ಕಿರಿದಾದ ಕಟ್ಟಡ ಇದಾಗಿದ್ದು, ಹಲವು ದಶಕಗಳನ್ನು ಕಂಡಿದೆ. ಸೂಕ್ತ ವ್ಯವಸ್ಥೆ ಇಲ್ಲದೆ ಕಚೇರಿ ಕೆಲಸಕ್ಕೆ ಆಗಮಿಸುವವರು ಸಮಸ್ಯೆ ಎದುರಿಸು ವಂತಾಗಿದೆ. ಸಾರ್ವಜನಿಕರಿಗೆ ಇಲ್ಲಿ ಕೂರಲೂ ಸೂಕ್ತ ವ್ಯವಸ್ಥೆ ಇಲ್ಲ. ಒಂದಿಬ್ಬರು ಕಚೇರಿಯ ಒಳಗೆ ತೆರಳಿದರೆ, ಇತರರು ಹೊರಗೆ ನಿಲ್ಲಬೇಕಾಗುತ್ತದೆ. ಕಚೇರಿ ಆವರಣದಲ್ಲಿ ಶೌಚಾಲಯವೂ ಇಲ್ಲದಿರುವದು ಸಾರ್ವಜನಿಕರಿಗೆ ಕಿರಿ ಕಿರಿಯಾಗುತ್ತಿದೆ. ಸಾರ್ವಜನಿಕರು ಹತ್ತು ಹಲವು ದಾಖಲೆಗಳನ್ನು ಪಡೆಯಲು ಇದೇ ಕಚೇರಿಯನ್ನು ಅವಲಂಬಿತರಾಗಿದ್ದಾರೆ. ಈ ನಡುವೆ ಕಚೇರಿಯಲ್ಲಿ ಶಾಶ್ವತ ಕಂದಾಯ ಪರಿವೀಕ್ಷಕರೂ ಇಲ್ಲ. ಇರುವ ಅಧಿಕಾರಿ ವಾರದಲ್ಲಿ ಕೇವಲ ಮೂರು ದಿನ ಮಾತ್ರ ಬಾಳೆಲೆ ಕಚೇರಿಯಲ್ಲಿ ಲಭ್ಯರಾಗುತ್ತಾರೆ. ಉಳಿದ ಮೂರು ದಿನ ಇವರನ್ನು ಶ್ರೀಮಂಗಲ ಕಚೇರಿಗೆ ನಿಯೋಜಿಸಲಾಗಿದೆ.

ಬಾಳೆಲೆಯಲ್ಲಿ ಇರುವ ನೆಮ್ಮದಿ ಕೇಂದ್ರವೂ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲೂ ಹಲವು ಸಮಸ್ಯೆಗಳಿವೆ. ಕಂದಾಯ ಕಚೇರಿ ಹಾಗೂ ನೆಮ್ಮದಿ ಕೇಂದ್ರವನ್ನು ಒಳಗೊಂಡಂತೆ ನೂತನವಾಗಿ ಸುಸಜ್ಜಿತವಾದ ಕಟ್ಟಡವೊಂದನ್ನು ನಿರ್ಮಿಸುವಂತೆ ಸಾರ್ವಜನಿಕರ ಪರವಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಅರಮಣಮಾಡ ಸತೀಶ್ ದೇವಯ್ಯ ಅವರು ‘ಶಕ್ತಿ’ಯ ಮೂಲಕ ಆಗ್ರಹಿಸಿದ್ದಾರೆ.

ಕಚೇರಿಯ ಹೆಂಚುಗಳೂ ಜಾರಿದ್ದು, ಅಪಾಯಕಾರಿಯಾಗಿದೆ. ಸುಮಾರು 6 ದಶಕಗಳ ಹಿಂದಿನ ಕಟ್ಟಡ ಇದಾಗಿದ್ದು, ನೂತನ ಕಟ್ಟಡ ನಿರ್ಮಿಸಲು ವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾಡಳಿತದ ಗಮನಕ್ಕೂ ಈ ಹಿಂದೆಯೇ ತರಲಾಗಿದೆ. ಇತ್ತೀಚೆಗೆ ಬಾಳೆಲೆ ಗ್ರಾ.ಪಂ.ನ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಆದರೂ ಈ ಬಗ್ಗೆ ತ್ವರಿತ ಸ್ಪಂದನ ದೊರೆತಿಲ್ಲ ಎಂದು ತಿಳಿಸಿರುವ ಸತೀಶ್ ದೇವಯ್ಯ ಅವರು ಸಂಬಂಧಿಸಿದವರು ಇಲ್ಲಿನ ಸಮಸ್ಯೆ ಅರಿತು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಂದಾಯ ಪರಿವೀಕ್ಷಕರು ವಾರದಲ್ಲಿ ಕೇವಲ ಮೂರು ದಿನ ಮಾತ್ರ ಲಭ್ಯವಾಗುತ್ತಿರುವದೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಅಧಿಕಾರಿ ಯನ್ನು ನಿಯೋಜಿಸು ವಂತೆಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಬಾಳೆಲೆ ಹೋಬಳಿಯಲ್ಲಿ ಆರ್.ಟಿ.ಸಿ. ಯಲ್ಲಿ ಬೆಳೆ ಕಲಂನಲ್ಲಿ ಬೆಳೆ ಹೆಸರು ಅದಲು ಬದಲಾಗಿದ್ದು, ಇದನ್ನು ಸರಿಪಡಿಸಲು ತಕ್ಷಣ ಸೂಕ್ತ ಕ್ರಮಕೈ ಗೊಳ್ಳಬೇಕೆಂದು ಸತೀಶ್ ದೇವಯ್ಯ ಆಗ್ರಹಿಸಿದ್ದಾರೆ.