ಮಡಿಕೇರಿ, ಮೇ 7: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ 15 ದಿನಗಳ ಬೇಸಿಗೆ ಶಿಬಿರ “ಕಲಿಕೆಗೊಂದು ವೇದಿಕೆ” ಕಾರ್ಯಕ್ರಮ ಚಾಲನೆಗೊಂಡಿದೆ.

ಬೇಸಿಗೆ ಶಿಬಿರ “ಕಲಿಕೆಗೊಂದು ವೇದಿಕೆ” ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನೆರವೇರಿಸಿ ಮಾತಾನಾಡಿ, ಬೇಸಿಗೆ ಶಿಬಿರವು ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಗೆ ಉತ್ತಮ ವೇದಿಕೆಯಾಗಿದೆ. ಮಕ್ಕಳು ಪರೀಕ್ಷೆ ಮುಗಿದ ನಂತರ ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡದೆ ಸರಕಾರದಿಂದ ಆಯೋಜಿಸಲಾಗುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಶುಭ ಹಾರೈಸಿದರು.

ಬೇಸಿಗೆ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯತ್ರಿ ವಹಿಸಿ ಮಾತಾನಾಡಿ, ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸುತ್ತಾ ಶುಭ ಹಾರೈಸಿದರು.

ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಮಾತನಾಡಿ, ಮಕ್ಕಳಿಗೆ 15 ದಿನಗಳು ನಡೆಯುವ ಬೇಸಿಗೆ ಶಿಬಿರದಲ್ಲಿ ಮಕ್ಕಳನ್ನು ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂಬ ಬಗ್ಗೆ ತಿಳಿಸಿದರು.

ಸದರಿ ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಕಾವೇರಿ ಮಕ್ಕಳ ಗೃಹ ಹಾಗೂ ವಿವಿಧ ಶಾಲೆ ಹೀಗೆ ಒಟ್ಟು 80 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸದರಿ ಶಿಬಿರದಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಯೋಗ, ಕಸದಿಂದ ರಸ, ವ್ಯಕ್ತಿತ್ವ ವಿಕಸನ ಹೀಗೆ ಹಲವು ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಬೆಳಿಗ್ಗೆ ತಂಪು ಪಾನೀಯ ಹಾಗೂ ಮಧ್ಯಾಹ್ನದ ಉಪಹಾರವನ್ನು ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಸಾವಿತ್ರಿ, ವಿಷಯ ಪರಿವೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಭರತ್, ಮೀರಾ ಹಾಗೂ ನಮಿತರಾವ್ ಇವರುಗಳು ಉಪಸ್ಥಿತರಿದ್ದರು. ಇಲಾಖೆಯ ಅಧಿಕಾರಿ ಮಮ್ತಾಜ್ ಸ್ವಾಗತಿಸಿದರು. ಕೆ.ವಿ. ಸತ್ಯಭಾಮ ನಿರೂಪಿಸಿದರು, ಎ.ಎಂ. ದಮಯಂತಿ, ವಂದಿಸಿದರು.

ಈ ಸಂದರ್ಭ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 9 ರಿಂದ 16 ವರ್ಷದೊಳಗಿನ 6 ಮಕ್ಕಳಿಗೆ ರೂ.10000/-ದಂತೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. 7ನೇ ತರಗತಿ, ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆ, ಕುಶಾಲನಗರದ ರೋಹಿತ್, 6ನೇ ತರಗತಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಶನಿವಾರಸಂತೆಯ ಧನ್ ಬಹದ್ದೂರ್ ಸಿಂಗ್, ಕೃತಜ್ಞಾ ಬಿ.ಎಸ್., 8ನೇ ತರಗತಿ, ಎಸ್.ಕೆ.ಎಸ್. ಪ್ರೌಢಶಾಲೆ, ಕೊಡ್ಲಿಪೇಟೆ ಹಾಗೂ ಕುಸುಮ ಹೆಚ್.ಎನ್. 9ನೇ ತರಗತಿ, ನರಿಯಂದಡ ಕೇಂದ್ರ, ಪ್ರೌಢಶಾಲೆ, ಆರ್ಯ, 7ನೇ ತರಗತಿ, ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯ, ಮಡಿಕೇರಿ ಹಾಗೂ ದಿಲೀಪ್ ಎಂ.ಎಂ., ಪ್ರಥಮ ಪಿ.ಯು.ಸಿ. ಸರ್ಕಾರಿ ಪ್ರೌಢಶಾಲೆ, ಹೆಗ್ಗಳ ಇವರುಗಳು ನಗದು ಸಹಿತ ಪ್ರಶಸ್ತಿ ಸ್ವೀಕರಿಸಿದರು.