ಮಡಿಕೇರಿ, ಮೇ 7: ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮುಟ್ಲು ಹಾಗೂ ಹಮ್ಮಿಯಾಲದಲ್ಲಿರುವ ಎರಡು ಅಂಗನವಾಡಿಗಳಲ್ಲಿ ಯಾವದೇ ಕಾಮಗಾರಿ ಕೈಗೊಳ್ಳದೆ ರೂ. 1 ಲಕ್ಷ ಗುಳುಂ (!) ಮಾಡಲಾಗಿದೆ ಎಂದು ತಾ. 5 ರ ‘ಶಕ್ತಿ’ ಬಹಿರಂಗಗೊಳಿಸಿದ ಬೆನ್ನಲ್ಲೇ ತಾ.ಪಂ. ಅಧ್ಯಕ್ಷರ ಸಹಿತ ಅಧಿಕಾರಿಗಳ ದಂಡು ಸಂಬಂಧಿಸಿದ ಅಂಗನವಾಡಿಗಳಿಗೆ ದೌಡಾಯಿಸಿದೆ.

ಈ ಎರಡು ಅಂಗನವಾಡಿಗಳಲ್ಲಿ ಒಂದೇ ದಿನದೊಳಗೆ ಅಲ್ಲೇ ಪಕ್ಕದಲ್ಲಿದ್ದ ಹಳೆಯ ಅಂಗನವಾಡಿಯ ಹೆಂಚುಗಳನ್ನು ಕಾಂಕ್ರೀಟ್ ಚಾವಣಿಯ ಮೇಲೆ ಹಾಸಿರುವದು ಕಂಡು ಬಂದಿದ್ದು, ಉಭಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತಾ. 6 ರಂದು ಗ್ರಾ.ಪಂ. ಆಯೋಜಿಸಿದ ವಾರ್ಡ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಉಭಯ ಗ್ರಾಮಸ್ಥರು, ಮಡಿಕೇರಿ ತಾ.ಪಂ. ಅಧ್ಯಕ್ಷರು, ತಾಲೂಕು ಕಾರ್ಯನಿರ್ವಹಣಾಧಿಕಾರಿ, ಸಂಬಂಧಿಸಿದ ಇಂಜಿನಿಯರ್ ಸಹಿತ ತರಾತುರಿಯಲ್ಲಿ ಗ್ರಾಮಕ್ಕೆ ಬಂದು ಖುದ್ದಾಗಿ ಇಂತಹ ಕಳಪೆ ಕೆಲಸ ಮಾಡಿದ್ದು, ಯಾರೊಬ್ಬರ ಗಮನಕ್ಕೆ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ಗ್ರಾಮದ ಅಂಗನವಾಡಿ ಉಸ್ತುವಾರಿ ಸಮಿತಿ ಗಮನಕ್ಕೂ ತಾರದೆ, ಈ ರೀತಿ ಮಾಡಿದಲ್ಲದೆ, ಕಳೆದ ಮಳೆಗಾಲದಲ್ಲಿ ಹಳೆಯ ಅಂಗನವಾಡಿ ಕಟ್ಟಡ ಬಿದ್ದು ಹೋಗುವಾಗ, ಗ್ರಾಮಸ್ಥರು ಸಂಗ್ರಹಿಸಿಟ್ಟಿದ್ದ ಹೆಂಚುಗಳನ್ನು ಯಾರ ಅರಿವಿಗೂ ತಾರದೆ ಬಳಸಿಕೊಂಡಿದ್ದು, ಕಳಪೆ ಕೆಲಸದ ಬಗ್ಗೆ ತನಿಖೆ ಕೈಗೊಂಡು, ಹಣ ದುರುಪಯೋಗದ ಹಿನ್ನೆಲೆ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕೆಂದು ಒತ್ತಾಯಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ, ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಗ್ರಾ.ಪಂ. ವರದಿ ಸಲ್ಲಿಸಲಿದ್ದು, ಸೂಕ್ತ ಕ್ರಮಕ್ಕೆ ಕೋರುವದಾಗಿ ಭರವಸೆ ನೀಡಿದರು.

ಪರಸ್ಪರ ದೋಷಾರೋಪ

ಈ ಬೆಳವಣಿಗೆ ಕುರಿತು ‘ಶಕ್ತಿ’ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಳಿ ಮಾಹಿತಿ ಬಯಸಿದಾಗ, ಸಂಬಂಧಿಸಿದ ಕೆಲಸ ನಿರ್ವಹಣೆಯು ತಾಲೂಕು ಶಿಶು ಅಭಿವೃದ್ಧಿ ಇಲಾಖೆಯದಾಗಿದೆ ಎಂದು ಸಮರ್ಥನೆ ನೀಡುತ್ತಾ, ತಾ.ಪಂ. ಅಧ್ಯಕ್ಷರ ಸಹಿತ ತಾನು ಪತ್ರಿಕಾ ವರದಿ ಹಿನ್ನೆಲೆ ಪರಿಶೀಲನೆಗೆ ತೆರಳಿದ್ದಾಗಿ ನುಡಿದರು.

ಶಿಶು ಅಭಿವೃದ್ಧಿ ಇಲಾಖೆಯ ತಾಲೂಕು ಪ್ರಮುಖರು ಸ್ಪಷ್ಟನೆ ನೀಡುತ್ತಾ, ತಾ.ಪಂ. ಇಂಜಿನಿಯರಿಂಗ್ ವಿಭಾಗ ಈ ಕೆಲಸ ಕೈಗೊಂಡಿದ್ದು, ಕಾಮಗಾರಿ ವರದಿ ಮೇರೆಗೆ ತಾವು ಹಣ ಪಾವತಿಸಿರುವದಷ್ಟೇ ಎಂದು ಸಮರ್ಥನೆ ನೀಡಿದರು.

ಇನ್ನೊಂದು ಮೂಲಗಳ ಪ್ರಕಾರ ಕೇವಲ 2 ವರ್ಷದಲ್ಲಿ ಮಡಿಕೇರಿ ತಾಲೂಕಿನ 57 ಅಂಗನವಾಡಿಗಳಿಗೆ ಈ ರೀತಿ ದುರಸ್ತಿಗಾಗಿ ರೂ. 41 ಲಕ್ಷಕ್ಕೂ ಅಧಿಕ ಅನುದಾನ ಬಿಡುಗಡೆಗೊಂಡು ಆ ಹಣವನ್ನು ಕಾಮಗಾರಿ ಹೆಸರಿನಲ್ಲಿ ಡ್ರಾ ಮಾಡಲಾಗಿದೆ. ಆದರೆ ಕೆಲಸ ಮಾತ್ರ ಶೂನ್ಯವೆಂಬ ಆರೋಪವಿದೆ. ಇದೀಗ ಮುಟ್ಲು ಹಾಗೂ ಹಮ್ಮಿಯಾಲ ಅಂಗನವಾಡಿಗಳ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ತಾ.ಪಂ. ದಂಡು ಇತರ 55 ಅಂಗನವಾಡಿಗಳತ್ತ ತುರ್ತು ದುರಸ್ತಿ ಕಾರ್ಯಗಳಲ್ಲಿ ತೊಡಗಿರುವದಾಗಿ ಮಾಹಿತಿ ಲಭಿಸಿದೆ. ಇತ್ತ ಅಲ್ಲಿನ ನಿವಾಸಿಗಳು ಕಣ್ಗಾವಲು ಇಡಬೇಕಷ್ಟೆ.

-ಮಿರರ್