ವೀರಾಜಪೇಟೆ, ಮೇ 7 : ಕಳೆದ ಮೂರು ದಿನಗಳಿಂದ ಇಲ್ಲಿನ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ನೆಲ್ಲಿಹುದಿಕೇರಿಯ ಅಫೀಶಿಯಲ್ ತಂಡ ಬಾಲ್ ಔಟ್‍ನಲ್ಲಿ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಅಪರಾಹ್ನ 4ಗಂಟೆಗೆ ನಡೆಯಬೇಕಾಗಿದ್ದ ಅಂತಿಮ ಪಂದ್ಯಾಟದ ಸಮಯದಲ್ಲಿ ಭಾರೀ ಮಳೆ ಗಾಳಿ ಮಿಂಚಿನೊಂದಿಗೆ ಸುರಿದ ಮಳೆಯಿಂದ ಕೊನೆ ಗಳಿಗೆಯಲ್ಲಿ ಕತ್ತಲೆಗೂ ಮುನ್ನ ಪಂದ್ಯಾಟದ ಅಂಪೈರುಗಳು ಬಾಲ್ ಔಟ್‍ನಲ್ಲಿ ವಿಜೇತರನ್ನು ಆಯ್ಕೆ ಮಾಡಲು ಆದೇಶ ನೀಡಿದ ಹಿನ್ನಲೆಯಲ್ಲಿ ಅಂತಿಮ ಪಂದ್ಯಾಟದಲ್ಲಿ ಸೆಣಸಾಡಲು ಸಿದ್ಧರಾಗಿದ್ದ ವೀರಾಜಪೇಟೆ ಚಾಲೆಂಜರ್ಸ್ ತಂಡ ಹಾಗೂ ನೆಲ್ಲಿಹುದಿಕೇರಿಯ ಅಫೀಶಿಯಲ್ ತಂಡಗಳ ನಡುವೆ ಬಾಲ್ ಔಟ್ ನಡೆದು ಚಾಲೆಂಜರ್ಸ್ ತಂಡ ರನ್ನರ್ಸ್ ಟ್ರೋಫಿಯಲ್ಲಿ ತೃಪ್ತಿಪಟ್ಟುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ ಸಮುದಾಯದ ಕುಟುಂಬಗಳ ನಡುವೆ ನಡೆಯುವ ಕ್ರೀಡಾ ಉತ್ಸವದಿಂದ ಸಾಮರಸ್ಯದ ಬದುಕು ಸಾಧ್ಯ. ಪ್ರತಿಭೆಗಳನ್ನು ಗುರುತಿಸುವ ಇಂತಹ ಕ್ರೀಡೆಗಳಿಗೆ ಹಾಗೂ ಸಂಘಟನೆಗಳಿಗೆ ಸರಕಾರ ಉತ್ತೇಜನ ನೀಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹಾಗೂ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ ಕೇವಲ ಸಮುದಾಯವಲ್ಲ, ಸರ್ವ ಜನಾಂಗ ಬಾಂಧವರು ಒಮ್ಮತದಿಂದ ಕ್ರೀಡಾ ಉತ್ಸವವನ್ನು ಏರ್ಪಡಿಸುವದರಿಂದ ಜಾತಿ, ಜಾತಿಗಳ ನಡುವೆ ಪರಸ್ಪರ ಪ್ರೀತಿಯ ಬಾಂಧವ್ಯದ ಬೆಸುಗೆಯಾಗಲಿದೆ ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಜಾತ್ಯಾತೀತ ಜನತಾದಳದ ಜಿಲ್ಲೆಯ ಉಸ್ತುವಾರಿ ವಿ.ಎಂ.ವಿಜಯನ್, ಸಿದ್ದಾಪುರ ಕೈರಳಿ ಸಮಾಜದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್ ಮಾತನಾಡಿದರು.

ಅತಿಥಿಗಳಾಗಿ ಗೋಣಿಕೊಪ್ಪ ಆರ್.ಎಂ.ಸಿ.ಅಧ್ಯಕ್ಷ ಸುವಿನ್ ಗಣಪತಿ, ಮಡಿಕೇರಿ ನಗರಸಭೆಯ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಬೆಂಗಳೂರು ಉದ್ಯಮಿ ಕೆ.ದೇವಯ್ಯ, ಸಿದ್ದಾಪುರದ ಸಜಿತ್, ಕಿಶೋರ್ ಅಮ್ಮತ್ತಿಯ ಕಿರಣ್, ಮತ್ತಿತರರು ಭಾಗವಹಿಸಿದ್ದರು. ಅತಿಥಿಗಳು ಬಹುಮಾನಗಳನ್ನು ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೀರಾಜಪೇಟೆ ಕೂರ್ಗ್ ಹಿಂದೂ ಮಲಯಾಳಿ ಅಸೋಶಿಯೇಶನ್‍ನ ಅಧ್ಯಕ್ಷ ಎನ್.ಎಸ್.ದರ್ಶನ್ ವಹಿಸಿದ್ದರು.

ಹಿಂದೂ ಮಲಯಾಳಿ ಅಸೋಶಿಯೇಷನ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಬಿ.ಹರ್ಷವರ್ಧನ್ ಹಾಗೂ ಹಿರಿಯ ವಕೀಲ ಸಿ.ಎಚ್ ಕರುಣಾಕರನ್, ಪಟ್ಟಣ ಪಂಚಾಯಿತಿ ಸದಸ್ಯ ಶೀಬಾ ಪ್ರಥ್ವಿನಾಥ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಗೋಣಿಕೊಪ್ಪಲಿನ ಸ್ನೇಕ್ ಶರತ್ ಕಾಂತ್, ವಿದ್ಯಾರ್ಥಿನಿಯರಾದ ಹರ್ಷಿತ ಹಾಗೂ ಎಂ.ಎಸ್.ಅಶ್ವಿನಿ ಇವರುಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಶಿವದಾಸ್ ಹಾಗೂ ವಿಜಯನ್ ನಿರೂಪಿಸಿದರು.

ಪಂದ್ಯಾಟದ ನಡುವೆ ಸಂಘಟನೆ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೇರಳದ ತಿರುವಾದಿ ನೃತ್ಯ, ಚಂಡೆ ಮೇಳ, ರಾತ್ರಿ ಸಿಡಿ ಮದ್ದಿನ ಪ್ರದರ್ಶನ ವೀಕ್ಷಕರಿಗೆ ವಿಶೇಷ ಮನರಂಜನೆ ನೀಡಿತು. ಸಂಜೆ ಸುರಿದ ಮಳೆಯಿಂದ ಮನರಂಜನೆ ಕಾರ್ಯಕ್ರಮಕ್ಕೂ ಅಡಚಣೆ ಉಂಟಾಯಿತು. ಅಂತಿಮ ಪಂದ್ಯಾಟ ವೀಕ್ಷಿಸಲು ಜಿಲ್ಲೆಯ ವಿವಿಧೆಡೆಗಳಿಂದ ಮಲೆಯಾಳಿ ಬಾಂಧವರು ಆಗಮಿಸಿದ್ದರು.