ಕುಶಾಲನಗರ, ಮೇ 7: ಕುಶಾಲನಗರದಲ್ಲಿ ನೂತನ ಸಂಘಟನೆ ‘ಕ್ಷೇಮ ಕುಶಾಲನಗರಕ್ಕಾಗಿ ನಾನು’ ಅಸ್ತಿತ್ವ ಪಡೆದಿದೆ. ಉದ್ಯಮಿ ಕೆ.ಎಸ್. ನಾಗೇಶ್ ಅವರನ್ನು ಸಮಿತಿಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಫೆರೋಜ್ ಮತ್ತು ಬಿ.ಎಸ್. ಶಾಂತಪ್ಪ ಅವರುಗಳನ್ನು ಸಹ ಸಂಚಾಲಕರುಗಳನ್ನಾಗಿ ನೇಮಿಸಲಾಯಿತು.

ಕುಶಾಲನಗರದಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯತತ್ಪರವಾಗಲಿದೆ ಎಂದು ಸಂಚಾಲಕ ಕೆ.ಎಸ್. ನಾಗೇಶ್ ತಿಳಿಸಿದ್ದಾರೆ. ಈ ಸಂದರ್ಭ ನಡೆದ ವಿವಿಧ ಸಂಘಟನೆಗಳ, ಧರ್ಮೀಯರ ಪ್ರಮುಖರ ಸಭೆಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಎಂ.ಹೆಚ್. ನಜೀರ್ ಅಹಮ್ಮದ್, ಮನೆ ಹಾಗೂ ಮನಸ್ಸುಗಳ ಮೂಲಕ ಸೌಹಾರ್ದತೆ ಒಳಗೊಂಡ ಸಮಾಜ ನಿರ್ಮಾಣ ಸಾಧ್ಯ ಎಂದರಲ್ಲದೆ, ಈ ನಿಟ್ಟಿನಲ್ಲಿ ಯುವಪೀಳಿಗೆ ಸಮಾಜಗಳ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಸ್ಥಳೀಯ ಜಾಮಿಯ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಲೀಂ, ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ಪಿ.ಎಂ. ಚಂಗಪ್ಪ, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಎನ್. ವಿಜಯೇಂದ್ರ, ಸಂತ ಸೆಬಾಸ್ಟಿಯನರ ನೂತನ ದೇವಾಲಯ ಸಮಿತಿ ಪ್ರಮುಖ ಬಿ.ಎಸ್. ಶಾಂತಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಉಪಸ್ಥಿತರಿದ್ದು, ಮಾತನಾಡಿದರು.

ಸಭೆಯಲ್ಲಿ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು, ಕಾರ್ಯದರ್ಶಿ ಕೆ.ಬಿ. ಮೋಹನ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್‍ರಾಜ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಹಿಲಾಲ್ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಸಲೀಂ, ಎಂ.ಹೆಚ್. ತನ್ವೀರ್ ಅಹಮ್ಮದ್, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜ್, ಬಿಜೆಪಿ ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ದಿನೇಶ್ ನಿಡ್ಯಮಲೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.