ಮಡಿಕೇರಿ, ಮೇ 7: ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಯೋಜನೆಯಡಿ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಕಂಬಗಳು ಅಲ್ಲಲ್ಲಿ ಅಪಾಯ ತಂದೊಡ್ಡುತ್ತಿರುವ ದೃಶ್ಯ ಗೋಚರಿಸಿದೆ. ಕೆ. ನಿಡುಗಣೆಯಿಂದ ಮಾಂದಲಪಟ್ಟಿ ಮಾರ್ಗವಾಗಿ ಹಾದು ಹೋಗಿರುವ ವಿದ್ಯುತ್ ಸಂಪರ್ಕದ ಕಂಬಗಳು ಅಲ್ಲಲ್ಲಿ ಮುರಿದು ಬೀಳುವ ಸ್ಥಿತಿಯಲ್ಲಿವೆ.

ಕೆಲವೆಡೆ ರಸ್ತೆಯತ್ತ ವಾಲಿದ್ದು, ಮುಂದಿನ ಗಾಳಿ-ಮಳೆಯಿಂದ ನೆಲಕಚ್ಚುವ ಮುನ್ಸೂಚನೆಯಲ್ಲಿವೆ. ಈ ಮಾರ್ಗದ ಹಮ್ಮಿಯಾಲ, ಹಚ್ಚಿನಾಡು, ಮುಟ್ಲು ಗ್ರಾಮಗಳಲ್ಲಿ ಆರೆಂಟು ದಿನಗಳಿಂದ ಈಗಲೇ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಮುಟ್ಲುವಿನಲ್ಲಿ ನಿಯಮಾನುಸಾರ 30 ಮೀಟರ್‍ಗೆ ಒಂದರಂತೆ ಅಳವಡಿಸಬೇಕಿರುವ ವಿದ್ಯುತ್ ಕಂಬಗಳನ್ನು 80 ರಿಂದ 100 ಮೀಟರ್ ದೂರದಲ್ಲಿ ಅಳವಡಿಸಿದ್ದು, ಸಣ್ಣಪುಟ್ಟ ಗಾಳಿ-ಮಳೆಗೆ ಪರಸ್ಪರ ತಂತಿಗಳಲ್ಲಿ ಘರ್ಷಣೆಯಾಗಿ ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗುವಂತಾಗಿದೆ ಎಂದು ವಿವರಿಸಿದ್ದಾರೆ.

ಇತ್ತ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದರೂ, ಬೀದಿ ಕಂಬಗಳನ್ನು ಗ್ರಾಮಸ್ಥರೇ ಹಣ ನೀಡಿ ತೆರವುಗೊಳಿಸುವದರೊಂದಿಗೆ ದುರಸ್ತಿಪಡಿಸಿಕೊಳ್ಳಬೇಕು ಎಂಬ ಸಬೂಬು ಹೇಳುತ್ತಿರುವದಾಗಿ ದೂರಿದ್ದಾರೆ.

ಇಲಾಖೆಯ ಮೇಲಧಿಕಾರಿಗಳು ಮಳೆಗಾಲಕ್ಕೆ ಮುನ್ನ ಇತ್ತ ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೆ ವಿದ್ಯುತ್ ಹಾದು ಹೋಗಿರುವ ಮಾರ್ಗದಲ್ಲಿ ಗ್ರಾಮಸ್ಥರೇ ರೆಂಬೆಕೊಂಬೆಗಳನ್ನು ತೆರವುಗೊಳಿಸಿ ಮಳೆ-ಗಾಳಿಯಿಂದ ಹಾನಿಯಾಗದಂತೆ ಕಾಳಜಿ ತೋರುತ್ತಿದ್ದು, ಇಲಾಖೆ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.