ಮಡಿಕೇರಿ, ಮೇ 7: ಎರಡು ವರ್ಷಗಳ ಹಿಂದೆ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪ್ರೇಮಿಸುವ ನಾಟಕವಾಡಿದಲ್ಲದೆ, ಆಕೆಯನ್ನು ಮದುವೆಯಾಗುವದಾಗಿ ನಂಬಿಸಿ ದೈಹಿಕ ಸಂಪರ್ಕವಿರಿಸಿಕೊಂಡು ಬಳಿಕ ವಂಚಿಸಿದ ಆರೋಪ ಮೇರೆಗೆ ಕರಿಕೆಯ ಯುವಕನೊಬ್ಬನನ್ನು ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ವರ್ಷದ ಹಿಂದೆಯೇ ವಂಚನೆಗೊಳಗಾದ ವಿದ್ಯಾರ್ಥಿನಿ ಭಾಗಮಂಡಲ ಠಾಣೆಗೆ ದೂರು ಸಲ್ಲಿಸಿದ್ದು, ಹಿರಿಯರ ಮಧ್ಯಸ್ಥಿಕೆಯಲ್ಲಿ ಮಾತುಕತೆ ಮೂಲಕ ಪ್ರೇಮಿಗಳನ್ನು ಒಗ್ಗೂಡಿಸಲು ಉಭಯಕಡೆ ಸಮ್ಮತಿಯೊಂದಿಗೆ ಆಕೆಗೆ 18 ವರ್ಷ ತುಂಬಿದೊಡನೆ ಮದುವೆಯ ತೀರ್ಮಾನ ಕೈಗೊಳ್ಳಲಾಗಿತ್ತು.

ಆ ನಡುವೆ ಯುವಕನ ಪೋಷಕರು ರಹಸ್ಯವಾಗಿ ಬೇರೊಬ್ಬಳು ಯುವತಿಯೊಂದಿಗೆ ಮದುವೆ ಮಾಡಲು ತಯಾರಿ ನಡೆಸಿದ್ದ ಸಂಗತಿ ಕೆಲವು ತಿಂಗಳ ಹಿಂದೆ ವಂಚನೆಗೊಳ ಗಾದಾಕೆಗೆ ತಿಳಿದಿದೆ. ವಿಷಯ ತಿಳಿಯುತ್ತಲೇ ಮತ್ತೆ ಯುವತಿ ಗ್ರಾಮದ ಹಿರಿಯರೊಂದಿಗೆ ಬಂದು ಭಾಗಮಂಡಲ ಠಾಣೆಗೆ ಮರು ದೂರು ಸಲ್ಲಿಸಿದ್ದಾಳೆ.

ಈ ಹಂತದಲ್ಲಿ ಮತ್ತೊಮ್ಮೆ ಉಭಯಕಡೆ ಮಾತುಕತೆ ನಡೆದಿದೆ. ಅದಾಗಲೇ ಬೇರೊಂದು ಯುವತಿ ಯೊಡನೆ ಏರ್ಪಾಡಾಗಿದ್ದ ವಿವಾಹ ಕೂಡ ಯುವಕನ ಪ್ರೇಮ ಪ್ರಸಂಗ ಬಹಿರಂಗಗೊಂಡು ಮುರಿದು ಬಿದ್ದಿದೆ. ಎರಡು ತಿಂಗಳ ಹಿಂದೆ ಪ್ರಿಯತಮೆಗೆ 18 ವರ್ಷ ತುಂಬಿದ್ದು, ಮತ್ತೆ ಆಕೆಯ ಪೋಷಕರು ಯುವಕನ ಪೋಷಕ ರೊಂದಿಗೆ ಮದುವೆಯ ವಿಷಯ ಪ್ರಸ್ತಾಪಿಸಿದ್ದಾರೆ. ಪ್ರಕರಣ ಮತ್ತೆ ಮೆಟ್ಟಿಲೇರಿದೆ.

ಎರಡು ವರ್ಷದಿಂದ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಅಲೆದು ಮನನೊಂದಿದ್ದ ಯುವತಿ, ತಾನು ನ್ಯಾಯ ಸಿಗದೆ ಹೋದರೆ ಬದುಕುಳಿಯಲಾರೆ ಎಂಬ ಶಪಥ ದೊಂದಿಗೆ ಠಾಣೆಯಿಂದ ಹೊರ ನಡೆದಿದ್ದಾಳೆ.

ಈ ಹಂತದಲ್ಲಿ ಠಾಣಾಧಿಕಾರಿ ಮತ್ತೆ ಯುವತಿಯ ಪೋಷಕರ ಮನವೊಲಿಸಿ ಹುಡುಗನ ಕಡೆಯಿಂದ ಇನ್ನು ಎರಡು ವರ್ಷ ಬಿಟ್ಟು ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಇರಿಸಿದ್ದಾಗಿ ಗೊತ್ತಾಗಿದೆ. ಇದುವರೆಗೆ 18 ವರ್ಷ ಆಗಲೆಂದು ಹೇಳಿದ್ದವರು ಮತ್ತೆ ಎರಡು ವರ್ಷದ ಕಾಲಾವಕಾಶ ಕೇಳಿದ್ದರಿಂದ, ದಿಕ್ಕು ತೋಚದ ಯುವತಿ ಪ್ರಿಯಕರ ಅತ್ಯಾಚಾರ ಎಸಗಿ ವಂಚಿಸಿದ್ದಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲೇ ಪುಕಾರು ಸಲ್ಲಿಸಿದ್ದಾಳೆ.

ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪ್ರೇಮಲೀಲೆ ತಿರುವು ಪಡೆದುಕೊಂಡಿದೆ. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೊಂದ ಯುವತಿ ಹಾಗೂ ಆಕೆಯ ಬಡ ಪೋಷಕರನ್ನು ಠಾಣೆಗೆ ಕರೆಸಿಕೊಳ್ಳಲಾಗಿದೆ.

ಅಪರಾಹ್ನ 3 ಗಂಟೆ ಬಳಿಕ ಕರಿಕೆಯ ಮುಖಂಡರು ಠಾಣೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಯುವಕನನ್ನು ಆತನ ಪೋಷಕರನ್ನು ಠಾಣೆಗೆ ಕರೆಸಲಾಗಿದೆ. ಈ ಹಂತದಲ್ಲಿ ಮತ್ತೆ ವಿವಾಹ ಮಾತುಕತೆ ಮುರಿದು ಬೀಳುತ್ತಲೇ ಕಾನೂನಿನಂತೆ ಯುವಕ ನಿತಿನ್‍ನನ್ನು ಬಂಧಿಸಿದ್ದು, ಆತನನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಮೇರೆಗೆ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.