ಪೊನ್ನಂಪೇಟೆ, ಮೇ 6: ಇಲ್ಲಿ ಕೊಡವರು ಮತ್ತು ಮುಸಲ್ಮಾನರು ಒಟ್ಟು ಸೇರಿದರೆ ಮಾತ್ರ ಉರೂಸ್ ನಡೆಯುತ್ತದೆ. ಇಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಿಗೂ ಉಭಯ ಕಡೆಯವರು ಸಮಾನರು. ಭೇದಭಾವಗಳು ಇಲ್ಲಿ ನುಸುಳಲು ಅವಕಾಶಗಳೇ ಇಲ್ಲ. ಕೊಡಗಿನಲ್ಲಿ ಕೊಡವರು ಮತ್ತು ಮುಸ್ಲಿಂಮರು (ಹೆಚ್ಚಾಗಿ ಕೊಡವ ಮುಸ್ಲಿಂಮರು) ಒಗ್ಗೂಡಿ ಆಚರಿಸುವ ಏಕೈಕ ಉರೂಸ್ (ವಾರ್ಷಿಕ ಉತ್ಸವ) ಇದಾಗಿದೆ. ಭವಿಷ್ಯ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರಲು ಇದಕ್ಕಿಂತ ಮಿಗಿಲಾದ ನಿದರ್ಶನಗಳು ಬೇಕಿಲ್ಲ. ಸದಾ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಸುವ ಪ್ರಸಕ್ತ ದಿನಗಳಲ್ಲಿ ಈ ಉರೂಸ್ ಭಾವೈಕ್ಯದ ಸಂದೇಶವನ್ನು ಒತ್ತಿ ಹೇಳುತ್ತದೆ. ಹಾಗಾದರೆ ವೈಶಿಷ್ಟ್ಯಪೂರ್ಣವಾದ ಕುತ್ತುನಾಡು ನೇರ್ಚೆಯ ಬಗ್ಗೆ ತಿಳಿಯಬೇಕೆ. ಮೇ8 ರಂದು ಸೋಮವಾರ ಕುತ್ತುನಾಡಿಗೆ ಬನ್ನಿ.

ಸಮಾಜದಲ್ಲಿ ಸಾಮರಸ್ಯ ಶಾಶ್ವತವಾಗಿ ನೆಲೆಗೊಳ್ಳಲು ಪೂರ್ವಿಕರು ಪ್ರತೀ ವರ್ಷ ವಾರ್ಷಿಕ ಉತ್ಸವ, ಧಾರ್ಮಿಕ ಜಾತ್ರೆ ಮೊದಲಾದವಗಳನ್ನು ಜಾರಿಗೆ ತಂದರು. ನಾಗರಿಕತೆ ಹೆಚ್ಚಾದಂತೆ ಜಾತ್ರೆ ಉತ್ಸವಗಳಿಗೆ ಮತೀಯ ಸೋಂಕು ತಗುಲಿಕೊಂಡಿತು. ಆದ್ದರಿಂದ ಯಾವದೇ ಜಾತ್ರೆ, ದೇವರ ವಾರ್ಷಿಕ ಉತ್ಸವಗಳು ಜಾತಿಯ ಹಿನ್ನೆಲೆ ನಡೆಯುವದು ಸಂಪ್ರದಾಯವಾಗಿ ಬಿಟ್ಟಿದೆ. ಆದರೆ ದಕ್ಷಿಣ ಕೊಡಗಿನ ಕುತ್ತುನಾಡು ಉರೂಸ್ ಇದಕ್ಕೆಲ್ಲವೂ ಅಪವಾದವಾಗಿ ಆಚರಿಸಲ್ಪಡುತ್ತಿದೆ. ನಾಗರಿಕ ಜಗತ್ತಿನ ಸೋಂಕು ಅಷ್ಟಾಗಿ ಬಾಧಿಸದೆ, ಯಾವದೇ ಮತೀಯ ಬಣ್ಣಗಳಿಂದ ನಡೆಯದೆ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕುತ್ತುನಾಡು ವಾರ್ಷಿಕ ಉರೂಸ್‍ಗೆ 400 ವರ್ಷಗಳ ಇತಿಹಾಸವಿದೆ. ಸಂರಕ್ಷಿಸಲ್ಪಟ್ಟ ಕಾಡಿನೊಳಗೆ ಜರುಗುವ ಈ ಉರೂಸ್ ತಾ. 8 ರಂದು ಅದ್ಧೂರಿಯಾಗಿ ನಡೆಯಲಿದೆ. ಅಸಂಖ್ಯ ಜನ ಪಾಲ್ಗೊಂಡು ತಮಗೆ ತಿಳಿಯದಂತೆಯೇ ಇಲ್ಲಿ ಸಾಮರಸ್ಯ ಮೆರೆಯುತ್ತಾರೆ.

ಉರೂಸ್ ಆಚರಣೆ ಹೀಗೆ: ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಎಮ್ಮೆಮಾಡಿನಲ್ಲಿ ಸಮಾಧಿಯಾಗಿರುವ ಸೂಫಿ ಶಹೀದ್‍ರವರ ಹೆಸರಿನಲ್ಲಿ ಕೊಡವರು ಮತ್ತು ಮುಸ್ಲಿಂಮರು ಸಮಾನ ಹಕ್ಕುದಾರರಾಗಿ ಪ್ರತೀ ವರ್ಷ ಆಚರಿಸಲ್ಪಡುವ ಕುತ್ತುನಾಡು ನೇರ್ಚೆ(ಉರೂಸ್)ಯ ದಿನವನ್ನು ಎಮ್ಮೆಮಾಡು ಉರೂಸ್‍ನ ಪ್ರಮುಖ ಸೋಮವಾರದಂದು ಬೇಗೂರು ಕಲ್ಲಾಯಿ ಮಸೀದಿಯ ಆಡಳಿತ ಮಂಡಳಿ, ಮಾಪಿಳೆತೋಡಿನ ತಕ್ಕರು ಕುತ್ತುನಾಡಿಗೆ ತೆರಳಿ ಅಲ್ಲಿ ಕರ್ತುರ ಕುಟುಂಬದ ತಕ್ಕರು ಮತ್ತು ಗ್ರಾಮಸ್ಥರೊಂದಿಗೆ ಸೇರಿ ನಿಶ್ಚಯಿಸುತ್ತಾರೆ. ನಿಶ್ಚಯಿಸಿದ ದಿನದಿಂದ ಸಂಪ್ರದಾಯದಂತೆ ಉರೂಸ್‍ಗೆ ‘ಕಟ್ಟು’ ಬೀಳುತ್ತದೆ. ಬಿ. ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮಕ್ಕೆ ಒಳಪಟ್ಟಿರುವ ಹೊಳೆದಡದ ಕಾಡಿನಲ್ಲಿ ಸೂಫಿ ಶಹೀದ್ ಅವರ ಹೆಸರಿನಲ್ಲಿ ಬಿಡಾರು ಹೊಂದಿದೆ. ಉರೂಸ್‍ನ ದಿನದಂದು ಬಿಡಾರದ ಬಳಿ ಬೆಳಿಗ್ಗೆ 8 ಗಂಟೆಗೆ ಆಲಿರ ಮತ್ತು ಕರ್ತುರ ಕುಟುಂಬದ ತಕ್ಕರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಕುತ್ತುನಾಡು ಉರೂಸ್‍ಗೆ ಚಾಲನೆ ದೊರೆಯುತ್ತದೆ. ಬಳಿಕ ಸಾಮೂಹಿಕ ಪ್ರಾರ್ಥನೆ ಜರುಗಿ ಧಾರ್ಮಿಕ ವಿಧಾನಗಳು ಆರಂಭಗೊಳ್ಳುತ್ತವೆ.

ಉರೂಸ್‍ನಲ್ಲಿ ಹಾಲನ್ನ (ಹಾಲು ಅನ್ನ)ದ ಪ್ರಸಾದಕ್ಕೆ ಪ್ರಾಶಸ್ತ್ಯವಿದೆ. ಧ್ವಜಾರೋಹಣದ ನಂತರ ಬಿಡಾರದ ಮುಂಭಾಗದಲ್ಲಿ 3 ಕಲ್ಲು ಸೇರಿಸಿ ಬೆಂಕಿ ಹಚ್ಚಿ ಪಾತ್ರೆಗೆ ಶುದ್ಧವಾದ ಹಾಲನ್ನು ಹಾಕಿ ಕುದಿಸುತ್ತಾರೆ. ಭಕ್ತರು ಹರಕೆ ರೂಪದಲ್ಲಿ ತರುವ ಹಾಲನ್ನೆಲ್ಲ ಇಲ್ಲಿ ಪ್ರಸಾದಕ್ಕೆ ಬಳಸಲಾಗುತ್ತದೆ. ಕುದಿಯುವ ಹಾಲಿಗೆ ಅಕ್ಕಿಯನ್ನು ಹಾಕಿ ಕೇವಲ ಹಾಲು ಮತ್ತು ಅಕ್ಕಿಯಿಂದ ಪ್ರಸಾದವನ್ನು ತಯಾರಿಸಿ ಸ್ಥಳದಲ್ಲೇ ಬಿಸಿ ಬಿಸಿಯಾಗಿ ವಿತರಿಸುತ್ತಾರೆ.

ಭಂಡಾರ ಅಜಮಾಯಿಸುವದು: ಉರೂಸ್ ದಿನದಂದು ಬೆಳಿಗ್ಗೆ ಆದ್ಯವಾಗಿ ಬಿಡಾರದ ಮುಂಭಾಗದಲ್ಲಿರುವ ಹೊಳೆಯಲ್ಲಿ (ನೇರ್ಚೆ ಗುಂಡಿ) ಬಾಳೆ ಗೊನೆಯೊಂದನ್ನು ಮುಳುಗಿಸಿ ಬಿಡಾರದ ದ್ವಾರದ ಮೇಲ್ಬಾಗದಲ್ಲಿ ಕಟ್ಟಲಾಗುತ್ತದೆ. ಈ ವೇಳೆ ಆಲಿರ ಕುಟುಂಬದ ತಕ್ಕರು ಪ್ರಾರ್ಥನೆ ಸಲ್ಲಿಸಿ ದ್ವಾರದ ಎಡಭಾಗದಲ್ಲಿ ಕೂರುತ್ತಾರೆ. ನಂತರ ಕೊಡವ ಜನಾಂಗದ ಕರ್ತುರ ಕುಟುಂಬದ ತಕ್ಕರನ್ನು ಗೌರವಪೂರ್ವಕವಾಗಿ ಆಹ್ವಾನಿಸಿ ದ್ವಾರದ ಬಲಭಾಗದಲ್ಲಿ ಕೂರಿಸಿದ ನಂತರ ಭಂಡಾರ ಇಡುವ ಸಂಪ್ರದಾಯ ಆರಂಭವಾಗುತ್ತದೆ. ಕಾರ್ಯ ಮುಗಿಯುವವರೆಗೂ ಉಭಯ ತಕ್ಕರು ಎಡ ಬಲ ಬದಿಯಾಗಿ ಕುಳಿತು ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಹುರಿದ ಅಕ್ಕಿ, ಕರಿಮೆಣಸು ಹಾಗೂ ಸಕ್ಕರೆಯಿಂದ ತಯಾರಿಸಿದ ‘ಕಾಪೊಡಿ’ ಮತ್ತು ನೇರ್ಚೆಗುಂಡಿಯಲ್ಲಿ ಮುಳುಗಿಸಿ ತಂದ ಬಾಳೆ ಹಣ್ಣು ಇಲ್ಲಿ ಭಕ್ತರಿಗೆ ನೀಡಲಾಗುವ ಪ್ರಸಾದ.

ಹರಕೆ ಮತ್ತು ಹರಾಜು: ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೊತ್ತುಕೊಳ್ಳುವ ಹರಕೆಗಳನ್ನು ಉರೂಸ್‍ನ ದಿನದಂದು ತಂದೊಪ್ಪಿಸುತ್ತಾರೆ. ಮಧ್ಯಾಹ್ನದ ನಂತರ ಹರಕೆ ಬಂದ ವಸ್ತುಗಳನ್ನು ಹರಾಜು ಮಾಡುವ ಪ್ರಕ್ರಿಯೆ ಉರೂಸ್‍ನ ಭಾಗವಾಗಿ ನಡೆಯುತ್ತದೆ. ಇದಕ್ಕಾಗಿ ಜನ ಬೆಳಿಗ್ಗೆಯಿಂದಲೇ ಕಾದು ಕುಳಿತ್ತಿರುತ್ತಾರೆ. ಹಸು, ಕರು, ಕೋಳಿ, ಅಕ್ಕಿ, ತೆಂಗಿನಕಾಯಿ, ಹಾಲು, ತುಪ್ಪ, ಕಾಫಿ, ಕರಿಮೆಣಸು ಮೊದಲಾದವುಗಳನ್ನು ಇಲ್ಲಿ ಹರಾಜು ಹಾಕಲಾಗುತ್ತದೆ. ಹರಕೆ ವಸ್ತುಗಳ ಪೈಕಿ ನಾಟಿಕೋಳಿ ಹೆಚ್ಚು ಸಂಖ್ಯೆಯಲ್ಲಿರುತ್ತದೆ. ನಾಟಿ ಕೋಳಿಗಳನ್ನು ಉರೂಸ್‍ನ ಹರಾಜಿನಲ್ಲಿ ಪಡೆದು ಮನೆಗೆ ಕೊಂಡೊಯ್ದು ಸಾಕಿದರೆ ಅವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ ಎಂದು ಭಕ್ತರು ನಂಬುತ್ತಾರೆ. ಇದರಿಂದ ನಾಟಿ ಕೋಳಿಯೊಂದು ಇಲ್ಲಿ 1500 ರಿಂದ 2000 ದವರೆಗೆ ಹರಾಜಾಗುತ್ತದೆ.

ಅನ್ನ ಪ್ರಸಾದ: ಉರೂಸ್‍ನ ಕೊನೆಯ ಭಾಗವಾಗಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತದೆ. ಉರೂಸ್‍ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಮಾಂಸಹಾರಿ ಅನ್ನ ಪ್ರಸಾದವನ್ನು ವಿತರಿಸಲಾಗುತ್ತದೆ. ಕೋಳಿ ಮಾಂಸ ಮತ್ತು ತುಪ್ಪದ ಅನ್ನ ಇಲ್ಲಿನ ಅನ್ನ ಪ್ರಸಾದದ ವಿಶೇಷ. ಅನ್ನ ಪ್ರಸಾದ ತಯಾರಾದ ಕೂಡಲೇ ಉಭಯ ತಕ್ಕರು ಜೊತೆ ಸೇರಿ ಅನ್ನ ಪ್ರಸಾದ ವಿತರಣೆಗೆ ಚಾಲನೆ ನೀಡುತ್ತಾರೆ. ಇದನ್ನು ಭಕ್ತರು ಶೃದ್ಧಾಭಕ್ತಿಯಿಂದ ಮನೆಗೆ ಕೊಂಡೊಯ್ದು ಕುಟುಂಬದವರೊಂದಿಗೆ ಊಟ ಮಾಡುತ್ತಾರೆ. ಅನ್ನ ಪ್ರಸಾದ ವಿತರಣೆ ಬಳಿಕ ಉರೂಸ್‍ಗೆ ತೆರೆ ಬೀಳಲಿದೆ.

ಉರೂಸ್‍ನ ಹಿನ್ನೆಲೆ: ಎಮ್ಮೆಮಾಡಿನಲ್ಲಿ ಸಮಾಧಿಯಾದ ಸೂಫಿ ಶಹೀದ್‍ರವರು ಕೊಡಗಿಗೆ ಬಂದ 4 ಶತಮಾನಗಳ ಹಿಂದೆ ದಟ್ಟಾರಣ್ಯವಾದ ಕುತ್ತುನಾಡಿನ ಕೊಂಗಣ ಕಾಡಿನಲ್ಲಿ ವಿಶ್ರಾಂತಿ ಪಡೆದರು. ಈ ವೇಳೆ ಕರ್ತುರ ಕುಟುಂಬಕ್ಕೆ ಸೇರಿದ ಹಸುವೊಂದು ಪ್ರತಿದಿನ ಹೊಳೆಗೆ ತೆರಳಿ ತನ್ನ ಕೆಚ್ಚಲನ್ನು ನೀರಿನಲ್ಲಿ ಮುಳುಗಿಸಿ ಬಂದು ಸೂಫಿ ಶಹೀದ್‍ರವರಿಗೆ ಹಾಲುಣಿಸುತ್ತಿತ್ತು. ಮನೆಯಲ್ಲಿ ಹಾಲು ಕರೆಯಲು ಬಿಡದ ಈ ಹಸು ಪ್ರತಿ ದಿನ ಬೇರೆಡೆಗೆ ತೆರಳುವದರಿಂದ ಸಂಶಯಗೊಂಡ ಮಾಲೀಕ ಬೆಳಿಗ್ಗೆ ಎದ್ದು ಹಸುವನ್ನು ಹಿಂಬಾಲಿಸಿದಾಗ ಈ ದೃಶ್ಯ ಕಂಡರು ಎನ್ನಲಾಗಿದೆ. ನಂತರ ಹಸುವಿನ ಮಾಲೀಕರಾದ ಕರ್ತುರ ವ್ಯಕ್ತಿಯೊಬ್ಬರಿಗೆ ಸೂಫಿ ಶಹೀದ್ ಅವರು ಆಶೀರ್ವಾದ ಮಾಡಿ ಅಲ್ಲಿಂದ ತೆರಳಿದರು ಎಂಬ ನಂಬಿಕೆ ಇದೆ.

ನಂಬಿಕೆಯ ಕೇಂದ್ರ: ಕುತ್ತುನಾಡಿಗೆ ಸೇರುವ ಕೊಂಗಣ, ಬಿ. ಶೆಟ್ಟಿಗೇರಿ ಮತ್ತು ಕುಟ್ಟಂದಿ ಗ್ರಾಮದ ಕೊಡವ ಜನಾಂಗದವರಿಗೆ ಈ ಬಗ್ಗೆ ಅಪಾರದವಾದ ನಂಬಿಕೆಯಿದೆ. ದನ-ಕರುಗಳು ನಾಪತ್ತೆಯಾದರೆ ಕುತ್ತುನಾಡಿನ ‘ಶೇಖಮಾರ್’ ಅವರ ಹೆಸರಿನಲ್ಲಿ ಹರಕೆ ಹೊತ್ತರೆ ತಕ್ಷಣ ಪ್ರತಿಫಲಿಸುವ ನಂಬಿಕೆ ಇಂದಿಗೂ ಇದೆ. ದÀನ-ಕರುಗಳಿಗೆ, ಕೋಳಿಗಳಿಗೆ ಕಾಯಿಲೆ ಬಂದಾಗ ಕುತ್ತುನಾಡಿನ ಬಿಡಾರದ ಮುಂಭಾಗದಲ್ಲಿರುವ ನೇರ್ಚೆ ಗುಂಡಿ ಹೊಳೆಯಿಂದ ನೀರು ಮತ್ತು ಬಿಡಾರದೊಳಗೆ ಶಾಶ್ವತವಾಗಿ ದೊರೆಯುವ ಹುತ್ತದ ಮಣ್ಣನ್ನು ತಂದು ಮಿಶ್ರಣ ಮಾಡಿ ದÀನ-ಕರು ಮತ್ತು ಕೋಳಿಗಳ ಮೇಲೆ ಸಿಂಪಡಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಸ್ಥಳೀಯರದ್ದು. ಬಿಡಾರದ ಹುತ್ತದ ಮಣ್ಣನ್ನು ತೆಗೆದು ಬಟ್ಟೆಯಲ್ಲಿ ಕಟ್ಟಿ ದನ-ಕರುಗಳ ಕೊಟ್ಟಿಗೆಯಲ್ಲಿ ಇಡುವ ಪರಿಪಾಠವು ಇಲ್ಲಿದೆ. ಈ ಕಾರಣದಿಂದಲೇ ದನ ಕರುಗಳು ಹರಕೆ ರೂಪದಲ್ಲಿ ಇಲ್ಲಿಗೆ ಬರುತ್ತಿದೆ..

ನೂತನ ಕಟ್ಟಡ: ಸೂಫಿ ಶಹೀದ್ ಅವರು ಅಂದಿನ ದಟ್ಟಾರಣ್ಯವಾಗಿದ್ದ ಕುತ್ತುನಾಡಿನಲ್ಲಿ ಕೆಲಕಾಲ ವಿಶ್ರಾಂತಿಯಲ್ಲಿದ್ದಾಗ ಕೊಡವ ಜನಾಂಗದ ಹಿರಿಯರೊಬ್ಬರು ಇದನ್ನು ಕಣ್ಣಾರೆ ಕಂಡರು ಎನ್ನಲಾಗಿದೆ. ಕಾಡಿನಲ್ಲಿ ವಿಶ್ರಾಂತಿ ಪಡೆದ ವ್ಯಕ್ತಿ ಮುಸ್ಲಿಮರೆಂದು ತಿಳಿದ ಇವರು ಮಾಪಿಳೆತೋಡುವಿನ ಕೊಡವ ಮುಸ್ಲಿಂ ಜನಾಂಗದವರನ್ನು ಮತ್ತು ಗ್ರಾಮಸ್ಥರನ್ನು ಸೇರಿಸಿಕೊಂಡು ಈ ವ್ಯಕ್ತಿ ವಿಶ್ರಾಂತಿ ಪಡೆದ ಸ್ಥಳದಲ್ಲಿ ಅವರ ನೆನಪಿಗಾಗಿ ಬಿಡಾರವೊಂದನ್ನು ನಿರ್ಮಿಸಿ ಪ್ರತಿ ವರ್ಷ ನೇರ್ಚೆ ಆಚರಿಸುವ ಪರಂಪರೆಯನ್ನು ಜಾರಿಗೆ ತಂದರು. ನೂರಾರು ವರ್ಷಗಳ ಹಿಂದೆ ನಿರ್ಮಿಸಿದ್ದ ನೇರ್ಚೆ ಬಿಡಾರ ಶಿಥಿಲಾವಸ್ಥೆಗೆ ತಲುಪಿದ ಕಾರಣ ಕಟ್ಟಡಕ್ಕೆ ಕಾಯಕಲ್ಪ ನೀಡಲು ಬೇಗೂರಿನ ಕಲ್ಲಾಯಿ ಮಸೀದಿ ಆಡಳಿತ ಮಂಡಳಿ ಮತ್ತು ಕೊಂಗಣ ಗ್ರಾಮಸ್ಥರು ಮುಂದಾದರು. ಇದರ ಫಲವಾಗಿ ಇದೀಗ ನೇರ್ಚೆ ಬಿಡಾರ ಹೊಸ ರೂಪು ಪಡೆದುಕೊಂಡಿದೆ. ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ವಿಶ್ರಾಂತಿ ಪಡೆದ ಮೂಲ ಸ್ಥಾನದಲ್ಲಿ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡವನ್ನು ಹಾಗೆ ಉಳಿಸಿಕೊಳ್ಳಲಾಗಿದ್ದು, ಸುತ್ತಲೂ ನೂತನವಾಗಿ ಕಟ್ಟಡ ನಿರ್ಮಿಸಲಾಗಿದೆ. ಕುತ್ತುನಾಡು ನೇರ್ಚೆ ಸಮಿತಿಯವರ ಜಂಟಿ ಖಾತೆಯಲ್ಲಿದ್ದ ರೂ. 1.5 ಲಕ್ಷ ಹಣ ಸೇರಿದಂತೆ ಜಾತಿ ಮತ ಭೇದವಿಲ್ಲದೇ ಜನತೆ ನೀಡಿದ ರೂ. 3.5 ಲಕ್ಷ ದೇಣಿಗೆ ಹಣವನ್ನು ಪಡೆದು ಕಾಮಗಾರಿ ಪೂರ್ಣಗೊಳಿಸಲಾಗಿದೆ

ಎಮ್ಮೆಮಾಡಿನಂತೆಯೇ ಕುತ್ತುನಾಡಿನಲ್ಲೂ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ. ಇಲ್ಲಿ ಪ್ರತಿ ವರ್ಷ ಉರೂಸ್ ಸಮಯದಂದು ಜೇನು ಗೂಡು ಪ್ರತ್ಯಕ್ಷವಾಗುವದು ಮತ್ತೊಂದು ವಿಶೇಷವಾಗಿದೆ. ಮಾಪಿಳೆತೋಡಿನ ಗ್ರಾಮಸ್ಥರು ಮತ್ತು ಕರ್ತುರ ಕುಟುಂಬದ ಉಸ್ತುವಾರಿಯಲ್ಲಿ ಕಡೇಮಾಡ, ಮಾಂಗೆರ, ತೀತಿಮಾಡ ಕುಟುಂಬಸ್ಥರು ಸೇರಿದಂತೆ ಸ್ಥಳೀಯ ಗ್ರಾಮವಾಸಿಗಳ ಸಹಕಾರದಲ್ಲಿ ಪ್ರತಿ ವರ್ಷ ನಡೆಯುವ ಕುತ್ತುನಾಡು ಉರೂಸನ್ನು ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರು ಸಾಕ್ಷೀಕರಿಸುತ್ತಾರೆ. ಕನ್ನಡದ ಆದಿ ಕವಿ ಪಂಪ ಅವರ ‘ಮಾನವ ಕುಲ ತಾನೊಂದೆ ವಲಂ’ ಎಂಬ ಮಾತಿನಂತೆ ಮಾನವರೆಲ್ಲರೂ ಒಂದೇ ಎಂಬ ಸಂದೇಶ ಕುತ್ತುನಾಡು ಉರೂಸ್‍ನಿಂದ ವ್ಯಕ್ತಗೊಳ್ಳುತ್ತದೆ.

- ರಫೀಕ್ ತೂಚಮಕೇರಿ