ವೀರಾಜಪೇಟೆ ಮೇ 6: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಒಳ ಚರಂಡಿ ಯೋಜನೆಗೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನದ ಯೋಜನೆಯಡಿಯಲ್ಲಿ ರೂ ಒಂದು ಕೋಟಿ ಮಂಜೂರಾತಿ ನೀಡುವದಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭರವಸೆ ನೀಡಿದ್ದಾರೆ.
ವೀರಾಜಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಹಮ್ಮದ್ ಜುನೇದ್ನ ಕ್ಯಾನ್ಸರ್ ಚಿಕಿತ್ಸೆಗಾಗಿ ರೂ 1,48,580 ಚಿಕಿತ್ಸೆ ವೆಚ್ಚದ ಮುಖ್ಯ ಮಂತ್ರಿ ನಿಧಿಯ ಪರಿಹಾರದ ಚೆಕ್ನ್ನು ವಿತರಿಸಿದರು. ಬಳಿಕ ಮಾತನಾಡಿದ ವೀಣಾ ಅಚ್ಚಯ್ಯ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ, ಪಂಜರ್ಪೇಟೆ ವಿಜಯನಗರ ಸೇರಿದಂತೆ ಅನೇಕ ಭಾಗಗಳು ಬಿಟ್ಟಂಗಾಲ, ಚೆಂಬೆಬೆಳ್ಳೂರು, ಬೇಟೋಳಿ ಗ್ರಾಮ ಪಂಚಾಯಿತಿಗೆ ಸೇರಿರುವದರಿಂದ ತೆರಿಗೆ ವಸೂಲಾತಿ, ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿರುವದರಿಂದ ಜಿಲ್ಲಾಧಿಕಾರಿಯೊಂದಿಗೆ ವಿಚಾರ ವಿನಿಮಯ ಮಾಡಿ ಪಟ್ಟಣ ಪಂಚಾಯಿತಿ ಸರಹದ್ದು ಗುರುತಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.
ಪ್ರತಿಯೊಂದು ಸೌಲಭ್ಯಗಳನ್ನು ಪಟ್ಟಣ ಪಂಚಾಯಿತಿಯಿಂದ ಪಡೆದು ಇದರ ಆದಾಯ ಗ್ರಾಮ ಪಂಚಾಯಿತಿಗೆ ಸಂದಾಯವಾಗುತ್ತಿದೆ ಎಂಬ ಕಾರ್ಯಕರ್ತರ ದೂರಿನ ಮೇರೆ ವೀಣಾ ಅಚ್ಚಯ್ಯ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಆರ್.ಎಂ.ಸಿ ಸದಸ್ಯ ಮಾಳೇಟಿರ ಬೆಲ್ಲು ಬೋಪಯ್ಯ, ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಎಂ.ಎಸ್. ಪೂವಯ್ಯ ಮತ್ತಿತರರು ಹಾಜರಿದ್ದರು.