ಮಡಿಕೇರಿ, ಮೇ 6: ನಾಪೋಕ್ಲು ವಿನಲ್ಲಿ ಕೊಡವ ಕಟುಂಬಗಳ ನಡುವೆ ನಡೆಯುತ್ತಿರುವ 21ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ ಅಂತಿಮ ಘಟ್ಟದತ್ತ ತಲಪುತ್ತಿದ್ದು, ಕುತೂಹಲ ಸೃಷ್ಟಿಸುತ್ತಿದೆ. ಈ ಬಾರಿಯ ಬಿದ್ದಾಟಂಡ ಕಪ್ ಹಾಕಿ ಉತ್ಸವದಲ್ಲಿ ದಾಖಲೆಯ 306 ತಂಡಗಳು ಭಾಗವಹಿಸಿದ್ದು, ಏಪ್ರಿಲ್ 17ರಿಂದ ಪ್ರಾರಂಭಗೊಂಡಿರುವ ಪಂದ್ಯಾವಳಿ 20 ದಿನ ಪೂರೈಸಿದೆ. ಇನ್ನು ಕೇವಲ 7 ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಣದಲ್ಲಿ ಬಲಿಷ್ಠ ತಂಡಗಳು ಮಾತ್ರ ಉಳಿದುಕೊಂಡಿವೆ.

ಪಂದ್ಯಾವಳಿ ಇದೀಗ ಪ್ರೀ ಕ್ವಾರ್ಟರ್ ಫೈನಲ್ ಹಂತದತ್ತ ತಲಪಿದೆ. 280 ಕುಟುಂಬ ತಂಡಗಳು ಪಂದ್ಯಾವಳಿಯಿಂದ ನಿರ್ಗಮಿಸಿವೆ. ಈ ಹಿಂದಿನ ಉತ್ಸವಗಳ ಚಾಂಪಿಯನ್ ತಂಡಗಳು, ರನ್ನರ್ಸ್ ಪ್ರಶಸ್ತಿ ಗಳಿಸಿರುವ ತಂಡಗಳೊಂದಿಗೆ ಕೆಲವು ಹೊಸ ತಂಡಗಳು ಈ ಬಾರಿ ಉತ್ತಮ ಪ್ರದರ್ಶನದೊಂದಿಗೆ ಮುಂದಿನ ಹಂತದತ್ತ ತಲಪಲು ಸೆಡ್ಡು ಹೊಡೆಯುತ್ತಿವೆ. ಕಣದಲ್ಲಿ ಬಲಿಷ್ಠ ತಂಡಗಳೇ ಉಳಿದಿದ್ದು, ರೋಮಾಂಚಕ ಪಂದ್ಯಗಳು ನಡೆಯುತ್ತಿರುವದರಿಂದ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಯಾ ತಂಡಗಳ ಬೆಂಬಲಿಗರು ತಮ್ಮ ತಮ್ಮ ತಂಡಗಳನ್ನು ಸಿಳ್ಳೆ, ಚಪ್ಪಾಳೆ, ಹರ್ಷೋದ್ಘಾರದಿಂದ ಉತ್ತೇಜನ ನೀಡುತ್ತಿದ್ದು, ರೋಚಕ ಹಾಕಿ ಕ್ರೀಡಾಭಿಮಾನಿಗಳಿಗೆ ಮುದ ನೀಡುತ್ತಿದೆ. ಈಗಾಗಲೇ ಆರು ಕುಟುಂಬಗಳು ಪ್ರಿ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆದಿದ್ದರೆ, ತಾ. 7ರಂದು (ಇಂದು) 7 ತಂಡಗಳು ಹಾಗೂ ತಾ. 8ರಂದು ಮೂರು ತಂಡಗಳು ನಿರ್ಧಾರವಾಗಬೇಕಿದೆ. ಮಾಜಿ ಚಾಂಪಿಯನ್‍ಗಳಾದ ಪಳಂಗಂಡ, ಅಂಜಪರವಂಡ ತಂಡದೊಂದಿಗೆ, ಕೊಂಗೇಟಿರ ತಂಡವು ಬೊಳ್ಳಂಡ ತಂಡವನ್ನು 2-0 ಗೋಲಿನ ಅಂತರದಿಂದ ಮಣಿಸಿ ಮುಂದಿನ ಸುತ್ತು ಪ್ರವೆಶಿಸಿತು. ಕೊಂಗೇಟಿರ ತಂಡದ ಪರ ನೀಲೆಸ್ ಮಾದಪ್ಪ, ಅನೀಶ್ ತಲಾ ಒಂದೊಂದು ಗೋಲು ದಾಖಲಿಸಿದರು. ಕುಲ್ಲೇಟಿರ ತಂಡವು 2-0 ಗೋಲಿನ ಅಂತರರಿಂದ ಕಟ್ಟೇರ ತಂಡವನ್ನು ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕುಲ್ಲೇಟಿರ ಶುಬಮ್ ಚಿಟ್ಟಿಯಪ್ಪ ಎರಡು ಗೋಲು ದಾಖಲಿಸಿದರು. ಮೇಕೇರಿರ ತಂಡವು 3-0 ಗೋಲಿನ ಅಂತರದಿಂದ ಕಾಂಡಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೆಶಿಸಿತು. ಮೇಕೇರಿರ ತಂಡದ ಪರ ನಿತಿನ್ ತಿಮ್ಮಯ್ಯ ಎರಡು, ಚೇತನ್ ಸುಬ್ರಮಣಿ ಒಂದು ಗೋಲು ದಾಖಲಿಸಿದರು. ಪರದಂಡ ತಂಡವು 5-0 ಗೋಲಿನ ಬಾರೀ ಅಂತರದಿಂದ ಚೇಂದಿರ ತಂಡವನ್ನು ಪರಾಭವಗೊಳಿಸಿತು. ಪರದಂಡ ತಂಡದ ಪರ ಮುತ್ತಣ್ಣ ಎರಡು ಮತ್ತು ರಂಜನ್ ಅಯ್ಯಪ್ಪ, ಕೀರ್ತಿ ತಲಾ ಒಂದೊಂದು ಗೋಲು ದಾಖಲಿಸಿದರು. ಮಾಜಿ ಚಾಂಪಿಯನ್ ಅಂಜಪರವಂಡ ತಂಡವು ಅರೆಯಡ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿ ಮುಂದಿನ ಸುತ್ತು ಪ್ರವೆಶಿಸಿತು. ಅಂಜಪರವಂಡ ತಂಡದ ಪರ ಚಿಟ್ಟಿಯಪ್ಪ ಒಂದು ಗೋಲು ದಾಖಲಿಸಿದರು. ಬಾಳೆಯಡ ಮತ್ತು ಕಡೇಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಳೆಯಡ ತಂಡವು ಟೈ ಬ್ರೇಕರ್ ಮೂಲಕ ಕಡೇಮಾಡ ತಂಡವನ್ನು ಸೋಲಿಸಿ ಪ್ರೀ ಕ್ವಾಟರ್ ಪೈನಲ್‍ಗೆ ಪ್ರವೇಶ ಪಡೆಯಿತು.