ಮಡಿಕೇರಿ, ಮೇ 7: ಗೌಡ ಜನಾಂಗವು ಉತ್ತಮ ಕೆಲಸ, ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಲಿ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.ನಗರದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಪೈಕೇರ ಕಪ್‍ನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಮೂಲಕ ಜನಾಂಗವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿರುವದು ಅಭಿನಂದನಾರ್ಹ ವಾಗಿದೆ. ಜೊತೆಗೆ ಸಾಧನೆ ಮಾಡಿರುವಂತಹ ಜನಾಂಗ ಬಾಂಧವರನ್ನು ಸನ್ಮಾನಿಸುತ್ತಿರುವದು ಉತ್ತಮ ಕಾರ್ಯವಾಗಿದೆ. ಈ ಕಾರ್ಯವನ್ನು ಮುಂದೆಯೂ ಮುಂದುವರೆಸುವಂತಾಗಬೇಕು. ಜನಾಂಗದ ಆಚಾರ- ವಿಚಾರ, ಸಂಸ್ಕøತಿಯನ್ನು ಉಳಿಸುವ ಕೆಲಸ ಜನಾಂಗದ ಒಗ್ಗೂಡುವಿಕೆಯಿಂದ ಸಾಧ್ಯವಾಗುತ್ತಿದೆ. ಪಂದ್ಯಾಟಕ್ಕೆ ತಮ್ಮ ಪಕ್ಷದ ಆಡಳಿತಾವಧಿಯಲ್ಲಿ ಅನುದಾನವನ್ನು ಕೊಡಲು ಆರಂಭಿಸಲಾಗಿತ್ತು. ಈ ಬಾರಿಯೂ ಕೊಡಿಸುವದಕ್ಕೆ ಪ್ರಯತ್ನಿಸಲಾಗುವದು ಎಂದು ಹೇಳಿದರು.

ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಗೌಡ ಜನಾಂಗ ಬಾಂಧವರು ಒಟ್ಟಿಗೆ ಸೇರಲು ಇದೊಂದು ಅವಕಾಶ ವಾಗಿದೆ. ಇದೊಂದು ರೀತಿಯಲ್ಲಿ ಜನಾಂಗ ಬಾಂಧವರ ಸಂತೋಷ ಕೂಟವೂ ಆಗಿದೆ. ಯುವ ಜನತೆ ಫೇಸ್‍ಬುಕ್, ವಾಟ್ಸಾಪ್‍ನಂತಹ ಅಂತರ್ಜಾಲದಲ್ಲಿ ಮೈ ಮರೆಯದೇ ಸಂಸ್ಕøತಿ, ಆಚಾರ- ವಿಚಾರವನ್ನು ಉಳಿಸುವಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಬೇಸಿಗೆ ಬಂತೆಂದರೆ ಜಿಲ್ಲೆಯಲ್ಲಿ ಹಬ್ಬಗಳ ಸರದಿ ಆರಂಭವಾಗುತ್ತದೆ. ಜನಾಂಗ ಬಾಂಧವರು ದಿಡ್ಡಳ್ಳಿ, ಪಾಲೆಮಾಡು, ದೇವಟಿ ಪರಂಬುವಿನಂತಹ ಸಮಸ್ಯೆಗಳಲ್ಲಿ ಮೂಗು ತೂರಿಸದೇ ಕ್ರೀಡೆಯಲ್ಲಿ ಭಾಗವಹಿಸುವದರ ಮೂಲಕ ಮೈಮರೆಯುವಂತಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರು ಬೊಮ್ಮಸಂದ್ರ ಪುರಸಭೆ ಸದಸ್ಯೆ ಯಮುನಾ ರತ್ನಕುಮಾರ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್, ಪೈಕೇರ ಪಟ್ಟೆದಾರ ನಂಜುಂಡ, ಪೈಕೇರ ಕ್ರಿಕೆಟ್ ಸಮಿತಿ ಅಧ್ಯಕ್ಷ ಅನಂತರಾಂ, ಕೊಡಗು ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಹಾಗೂ ಇನ್ನಿತರರು ಇದ್ದರು.

ಪೈಕೇರ ಕ್ರಿಕೆಟ್ ಕಪ್ ಸಮಾರೋಪ ಸಮಾರಂಭದ ಪ್ರಯುಕ್ತ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕøತಿಕ ಸಂಭ್ರಮ, ಮೈಸೂರಿನ ಆನಂದ್ ಮತ್ತು ತಂಡದಿಂದ ಹಾಸ್ಯ ಲಹರಿ ಹಾಗೂ ರಸ ಮಂಜರಿ ಕಾರ್ಯಕ್ರಮ ನಡೆಯಿತು. ಸುಚಿ ತಂಡ ಪ್ರಾರ್ಥಿಸಿ, ಗೌಡ ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಷನ್ ಸ್ವಾಗತಿಸಿದರೆ, ಕ್ರಿಕೆಟ್ ಉತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಪರಿಚನ ಸತೀಶ್ ವಂದಿಸಿದರು.