ವೀರಾಜಪೇಟೆ, ಮೇ 6: ಕೆ.ಆರ್. ನಗರದಿಂದ ಗಾರೆ ಕೆಲಸಕ್ಕಾಗಿ ವೀರಾಜಪೇಟೆಗೆ ಬಂದಿದ್ದ ಮೂರು ಮಂದಿ ಕಾರ್ಮಿಕರ ಮೇಲೆ ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರೆನ್ನಲಾಗಿದ್ದು, ಮೂರು ಮಂದಿ ಗಂಭೀರ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾ. 4 ರಂದು ಸಂಜೆ 6 ಗಂಟೆಯ ಸಮಯದಲ್ಲಿ ಹಾತೂರು ಗ್ರಾಮದ ಉತ್ತಯ್ಯ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಸೌದೆಯನ್ನು ಜೋಡಿಸಿ ರಸ್ತೆಯ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ, ಪ್ರತಾಪ (23), ರಂಗಸ್ವಾಮಿ (21) ಹಾಗೂ ಧರ್ಮೇಶ್ (20) ಎಂಬ ಮೂವರನ್ನು ಅರಣ್ಯ ಇಲಾಖೆಯ ಜೀಪಿನಲ್ಲಿ ಪೊನ್ನಂಪೇಟೆಯ ಕಚೇರಿಗೆ ಕರೆದುಕೊಂಡು ಹೋಗಿ ಕತ್ತಲೆ ಕೋಣೆಯ ಕೊಠಡಿಯಲ್ಲಿ ಸಹಾಯಕ ಅರಣ್ಯಾಧಿಕಾರಿ ಶ್ರೀಪತಿ, ರೇಂಜರ್ ಉತ್ತಯ್ಯ ಫಾರೆಸ್ಟ್ ರಾಕೇಶ್ ಸೇರಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂಬ ದೂರಿನ ಮೇರೆ ಗೋಣಿಕೊಪ್ಪ ಪೊಲೀಸರು ಗಾಯಾಳುಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಕೆ.ಆರ್. ನಗರದ ಯುವ ಕಾರ್ಮಿಕರ ಪೋಷಕರು ನೀಡಿದ ದೂರಿನ ಮೇರೆ ಜಯ ಕರ್ನಾಟಕ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಮಂಡೇಟಿರ ಅನಿಲ್ ಅವರು ಮಾನವ ಹಕ್ಕುಗಳ ಆಯೋಗದ ಸಂಚಾಲಕ ನಾಣಯ್ಯ ಅವರೊಂದಿಗೆ ಪೊನ್ನಂಪೇಟೆ ಅರಣ್ಯ ಕಚೇರಿಗೆ ತೆರಳಿ ವಿಚಾರಿಸಿದಾಗ ಕಾರ್ಮಿಕರು ಅಲ್ಲಿಯೇ ಕೊಠಡಿಯಲ್ಲಿದ್ದರು. ಬಳಿಕ ಗಾಯಗೊಂಡಿದ್ದ ಮೂವರು ನಿನ್ನೆ ದಿನ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂರು ಮಂದಿ ಗಾಯಾಳುಗಳು ಆಸ್ಪತ್ರೆಗೆ ದಾಖಲಾದ ಸಂಬಂಧದಲ್ಲಿ ಪೊಲೀಸರಿಗೆ ವೀರಾಜಪೇಟೆÉ ಆಸ್ಪತ್ರೆಯಿಂದ ಮಾಹಿತಿ ರವಾನಿಸಿದರು. ನಂತರ ಎ.ಎಸ್.ಐ. ನಾಗರಾಜು ಹಾಗೂ ಸಿಬ್ಬಂದಿ ವಿಚಾರಣೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಇಲಾಖೆಯ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿದ್ದು, ಆ ಮೇರೆಗೆ ಮೂವರು ಅಧಿಕಾರಿಗಳಾದ ಶ್ರೀಪತಿ, ಉತ್ತಯ್ಯ, ರಾಕೇಶ್ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಾಗಿದೆ.

ಎ.ಸಿ.ಎಫ್. ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸುವದಾಗಿ ಎಸ್.ಐ. ನಾಗರಾಜ್ ತಿಳಿಸಿದ್ದಾರೆ.

ವರದಿ: ಡಿ.ಎಂ.ಆರ್.