ಶ್ರೀಮಂಗಲ, ಮೇ 7: ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಕಾಫಿ ಹಾಗೂ ಕರಿಮೆಣಸು ಮಾರುಕಟ್ಟೆ ದರ ದಿಢೀರಾಗಿ ಕುಸಿದಿದ್ದು, ರೈತರು-ಬೆಳೆಗಾರರು ಕಂಗಾಲಾಗಿದ್ದಾರೆ. ಬ್ಯಾಂಕುಗಳು ರೈತರು ಹಾಗೂ ಬೆಳೆಗಾರ ಹೊಂದಿರುವ ಸಾಲದ ಬಲಾತ್ಕಾರ ವಸೂಲಾತಿ ಮಾಡುವದನ್ನು ನಿಲ್ಲಿಸಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.

ಗ್ರಾ.ಪಂ. ಕಚೇರಿಯಲ್ಲಿ ಈ ಬಗ್ಗೆ ರೈತರೊಂದಿಗೆ ಸಭೆ ನಡೆಸಿ, ಕಾಫಿ ದರ ರೋಬಸ್ಟ, ಚೆರಿ 4 ಸಾವಿರವಿದ್ದ ದರ 3 ಸಾವಿರಕ್ಕೆ ಕುಸಿದಿದೆ. ಹಾಗೆಯೇ ಕರಿಮೆಣಸು ಫಸಲಿನ ದರ 700 ಇದ್ದ ದರ 450ಕ್ಕೆ ಕುಸಿದಿದೆ. ಭವಿಷ್ಯದ ಬಗ್ಗೆ ರೈತರಲ್ಲಿ ಚಿಂತೆ ಮೂಡಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಸಹಕಾರ ಸಂಘದಲ್ಲಿರುವ ರೈತರ ಸಾಲವನ್ನು ಕನಿಷ್ಟ 3 ಲಕ್ಷದವರೆಗೆ ಮನ್ನಾಮಾಡಿ ಹೊಸ ಸಾಲ ನೀಡಬೇಕು. ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕು ಗಳಲ್ಲಿರುವ ರೈತರ ಎಲ್ಲಾ ಸಾಲಗಳನ್ನು ಸಹ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಗೆ ಮೋಡ ಬಿತ್ತನೆ ಬೇಡ: ಕೊಡಗು ಜಿಲ್ಲೆಗೆ ಸ್ವಾಭಾವಿಕವಾಗಿ ಮಳೆ ಬರಬೇಕು. ಅದು ಬಿಟ್ಟು ಮೋಡ ಬಿತ್ತನೆಯ ಮೂಲಕ ಮಳೆ ಸುರಿಸುವ ಅಸ್ವಾಭಿಕವಾದ ಕ್ರಮ ಬೇಡ ಎಂದ ತಂಬಿ ನಾಣಯ್ಯ, ಜಿಲ್ಲೆಯ ನೈಸರ್ಗಿಕ ಅರಣ್ಯವನ್ನು ರಕ್ಷಿಸಬೇಕು. ನೈಸರ್ಗಿಕ ಅರಣ್ಯದಲ್ಲಿ ಮರಗಳ್ಳತನ, ಅಕ್ರಮ ಮರ ಹನನ ತಡೆಗಟ್ಟಬೇಕು. ಭತ್ತದ ಗದ್ದೆ ಹಾಗೂ ಕಾಫಿ ತೋಟಗಳು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ ಯಾಗುವದನ್ನು ಕಟ್ಟುನಿಟ್ಟಿನ ಕಾನೂನು ಮೂಲಕ ನಿರ್ಬಂಧಿಸುವ ಮೂಲಕ ಜಿಲ್ಲೆಯ ಸ್ವಾಭಾವಿಕವಾದ ಮಳೆ ಸುರಿಸುವ ಪರಿಸರವನ್ನು ಸಂರಕ್ಷಿಸಬೇಕು ಎಂದರು. ಸಭೆಯಲ್ಲಿ ಸ್ಥಳೀಯ ಬೆಳೆಗಾರರಾದ ನೆಲ್ಲೀರ ಈರಪ್ಪ, ಕಾಳಿಮಾಡ ಸೋಮಯ್ಯ ಹಾಜರಿದ್ದರು.