ಕೂಡಿಗೆ, ಮೇ 7: ನಮ್ಮನ್ನು ಬಲವಂತದಿಂದ ಲಾರಿಗಳಲ್ಲಿ ತುಂಬಿ ಕೊಂಡು ಬಂದು ಬ್ಯಾಡಗೊಟ್ಟದಲ್ಲಿ ಸುರಿದಿದ್ದಾರೆ. ಯಾವದೇ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸದೆ, ವಸತಿ ವ್ಯವಸ್ಥೆ ಸಹ ಇಲ್ಲದೆ ಏಕಾಏಕಿ ಕರೆ ತಂದಿದ್ದಾರೆ. ರಾತ್ರಿ ಸುರಿದ ಭಾರೀ ಮಳೆಯಲ್ಲಿ ಚಿಕ್ಕ ಮಕ್ಕಳು ಸೇರಿ ಸುಮಾರು 450ಕ್ಕೂ ಹೆಚ್ಚು ನಮ್ಮ ಕುಟುಂಬಗಳು ಟಾರ್ಪಲ್ ಹೊದ್ದು ರಾತ್ರಿ ಕಳೆದಿದ್ದೇವೆ. ಎಂದು ಆದಿವಾಸಿ ಕುಟುಂಬದ ಮುತ್ತಮ್ಮ ಅಳಲು ತೋಡಿಕೊಂಡಿದ್ದಾರೆ.ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ನಿರಾಶ್ರಿತರ ಸಂಕಷ್ಟಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ದಿಡ್ಡಳ್ಳಿಯಿಂದ ತೆರವುಗೊಳಿಸುವಾಗ ಬ್ಯಾಡಗೊಟ್ಟದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಸುಳ್ಳುಮಾಹಿತಿ ನೀಡಿದ ಅಧಿಕಾರಿಗಳು ಹಾಗೂ ಪೆÇಲೀಸರು ನಮ್ಮನ್ನು ಕರೆತಂದಿದ್ದಾರೆ. ರಾತ್ರಿ ತಂಗಲು ಕಲ್ಪಿಸಿದ್ದ 3 ದೊಡ್ಡ ಕಟ್ಟಡಗ ಳಲ್ಲಿ 2 ಕಟ್ಟಡಗಳಲ್ಲಿ ಮೇಲ್ಚಾವಣಿ ಕೂಡ ಇಲ್ಲದೆ ಭಾರಿ ಮಳೆಗೆ ಕಷ್ಟದಲ್ಲಿ ಜೀವನ ಕಳೆದಿದ್ದೇವೆ. ಬೆಳಗ್ಗಿನ ಜಾವ 8 ಚಿಕ್ಕ ಮಕ್ಕಳು ಅಸ್ವಸ್ಥಗೊಂಡು, ಕುಶಾಲನಗರದ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದೇವೆ. ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಐ.ಟಿ.ಡಿ.ಪಿ. ಇಲಾಖೆ ನಿರ್ಲಕ್ಷ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೆಂಟ್‍ಗಳನ್ನು ನಿರ್ಮಿಸಿಕೊಡು ತ್ತೇವೆಂದು ಹೇಳಿದ್ದಾರೆ, ತಂಗಲು ಹಾಸಿಗೆಗಳಿಲ್ಲ, ಗುದ್ದಲಿ ಹಾರೆ, ಪಿಕಾಸಿಗಳನ್ನು ಅರಣ್ಯ ಇಲಾಖೆ ಯವರು ವಶಪಡಿಸಿಕೊಂಡಿದ್ದಾರೆ. 30x40 ನಿವೇಶನ ಕೊಡುತ್ತೇವೆಂದು ಹೇಳುತ್ತಿದ್ದಾರೆ, ನಮಗೆ ಕೇವಲ ನಿವೇಶನ ಸಾಲದು, ನಮ್ಮ ಎಲ್ಲಾ ಕುಟುಂಬಗಳಿಗೆ ತಲಾ 2 ಎಕರೆ ವ್ಯವಸಾಯ ಭೂಮಿ ಬೇಕೇ ಬೇಕು ಹಾಗೆಯೇ ನಮ್ಮ ಹೆಸರಿಗೆ ಆರ್.ಟಿ.ಸಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯ

(ಮೊದಲ ಪುಟದಿಂದ) ಅಧ್ಯಕ್ಷ ರಾಜಾರಾವ್ ಸ್ಥಳಕ್ಕೆ ಭೆÉೀಟಿ ನೀಡಿ, ಗಿರಿಜನರ ಸಂತತಿಯನ್ನು ನಾಶ ಮಾಡಲು ಸರ್ಕಾರ ಹೊರಟಿದೆ, ಕುರುಬರು ಎಂದು ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಆದಿವಾಸಿಗಳಿಗೆ ಯಾವದೇ ಸೌಕರ್ಯ ನಿರ್ಮಿಸದೆ ಬಲವಂತವಾಗಿ ಎಳೆದು ತಂದು ಪಂಜರಕ್ಕೆ ಹಾಕಿದಂತಾಗಿದೆ ಎಂದು ದೂರಿದರು.

ಸ್ಥಳದಲ್ಲಿ ಡಿ.ವೈ.ಎಸ್.ಪಿ. ಸಂಪತ್ ಕುಮಾರ್, ವೃತ್ತ ನಿರೀಕ್ಷಕ ಕ್ಯಾತೇಗೌಡ, ಕಂದಾಯ ಇಲಾಖೆ ಅಧಿಕಾರಿ ನಂದಕುಮಾರ್, ಗ್ರಾಮ ಲೆಕ್ಕಿಗ ಗೌತಮ್, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.

ರಾತ್ರಿ ಸುರಿದ ಮಳೆಗೆ ಸಾಮಗ್ರಿ, ಬಟ್ಟೆಗಳು, ಆಹಾರ ಪದಾರ್ಥಗಳು ನೀರಿನ ಪಾಲಾಗಿದ್ದು ಅವುಗಳನ್ನು ಒಣಗಿಸಲು ಅಲ್ಲಲ್ಲಿ ಬಿಸಿಲಿಗೆ ಹರಡಿಕೊಂಡಿದ್ದರು. 2 ಸಾವಿರ ನಿರಾಶ್ರಿತರಿಗೆ ಕುಶಾಲನಗರದ ಖಾಸಗಿ ಹೊಟೇಲ್‍ನಿಂದ ಊಟದ ವ್ಯವಸ್ಥೆ ಇತ್ತು.

ಒಂದೆರಡು ದಿನದಲ್ಲಿ ಸಮರ್ಪಕ ವ್ಯವಸ್ಥೆ: ಡಿ.ಸಿ.

ದಿಡ್ಡಳ್ಳಿ ಮೀಸಲು ಅರಣ್ಯದಲ್ಲಿ ಅನಧಿಕೃತವಾಗಿ ನೆಲೆಸಿದ್ದ ಆದಿವಾಸಿ ನಿರಾಶ್ರಿತರನ್ನು ಅರಣ್ಯದಿಂದ ತೆರವುಗೊಳಿಸುವದು ಅನಿವಾರ್ಯತೆಯೂ ಆಗಿತ್ತು. ನಿರಾಶ್ರಿತರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮೂರು ತಿಂಗಳ ಅಲ್ಪಾವಧಿಯಲ್ಲಿ ಸಾಕಷ್ಟು ಶ್ರಮ ವಹಿಸಿ ಕೆಲಸ ನಿರ್ವಹಿಸಿದೆ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿದ ನಂತರದ ಬೆಳವಣಿಗೆಗಳ ಕುರಿತು ಅವರು ‘ಶಕ್ತಿ'ಯೊಂದಿಗೆ ಮಾತನಾಡಿದರು. ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ನಿರಾಶ್ರಿತರು ನಿನ್ನೆಯಿಂದ ವಾಸವಿದ್ದಾರೆ. ಈ ಸ್ಥಳದಲ್ಲಿ ತಾತ್ಕಾಲಿಕ ಶೆಡ್, ಕುಡಿಯುವ ನೀರು ಸೇರಿದಂತೆ ಇತರ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದ್ದು, ನಿನ್ನೆಯಿಂದ ಊಟವನ್ನೂ ನೀಡಲಾಗುತ್ತಿದೆ. ಇಲ್ಲಿ ನೆಲಸುವವರಿಗೆ ನರೇಗಾ ಮೂಲಕ ಉದ್ಯೋಗ ನೀಡುವ ಪ್ರಯತ್ನವೂ ನಡೆಯುತ್ತಿದೆ. ಮುಂದಿನ ಒಂದೆರಡು ದಿನದಲ್ಲಿ ವ್ಯವಸ್ಥೆ ಒಂದು ಹಂತಕ್ಕೆ ಬರಲಿದೆ. ಎಲ್ಲವನ್ನೂ ಪವಾಡದ ರೀತಿ ಮಾಡುವದು ಕಷ್ಟ. ನೂರಾರು ಸಮಸ್ಯೆಗಳ ನಡುವೆ ಜಿಲ್ಲಾಡಳಿತ ಅಲ್ಪಾವಧಿಯಲ್ಲಿ ನಿವೇಶನ ನೀಡಲು ಮಾಡಿರುವ ಕೆಲಸ ದೊಡ್ಡದು ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು. ಈಗ ಕಲ್ಪಿಸಲಾಗುತ್ತಿರುವ ಜಾಗದಲ್ಲಿ ಅರಣ್ಯ ಪ್ರದೇಶಕ್ಕಿಂತ ಉತ್ತಮ ಸೌಲಭ್ಯಗಳು ಇವರಿಗೆ ಸಿಗುತ್ತವೆ. ರಸ್ತೆ, ನೀರು, ಶೌಚಾಲಯ, ವಿದ್ಯುಚ್ಛಕ್ತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಆಗಲಿವೆ. ಜಿಲ್ಲಾಡಳಿತ ಸಂಗ್ರಹಿಸಿರುವ ದಾಖಲೆಯಂತೆ 528 ಕುಟುಂಬಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ನಡುವೆ ಮತ್ತೆ ಅನಧಿಕೃತವಾಗಿ ಕೆಲವರು ಸೇರುತ್ತಿರುವ ಬಗ್ಗೆ ತಿಳಿದುಬಂದಿದ್ದು, ಈ ಬಗ್ಗೆ ಗಮನಿಸಲಾಗುತ್ತಿದೆ. ವಸತಿ ರಹಿತರಿಗೆ ನಿವೇಶನ ನೀಡಲು ಜಿಲ್ಲೆಯ ಇತರೆಡೆಗಳಲ್ಲಿ ಜಾಗ ಗುರುತಿಸಲಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಈಗಾಗಲೇ 60 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಆರ್.ವಿ. ಡಿಸೋಜ ಮಾಹಿತಿ ನೀಡಿದರು.

ಪ್ರಚೋದಿಸಿದರೆ ಕ್ರಮ

ಆದಿವಾಸಿ ಮುಖಂಡರಾದ ಮುತ್ತಮ್ಮ, ಅಪ್ಪಾಜಿ ಅವರುಗಳು ಇದೀಗ ಇಲ್ಲಿ ಸೇರಿದ್ದಾರೆ. ವ್ಯವಸ್ಥೆ ಕಲ್ಪಿಸಲಾಗುತ್ತಿ ರುವ ಪ್ರಯತ್ನದ ನಡುವೆ ಇವರು ಮತ್ತೆ ಆದಿವಾಸಿಗಳನ್ನು ಪ್ರಚೋದಿಸಲು ಮುಂದಾದರೆ ಇವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆಗೂ ನಿರ್ದೇಶನ ನೀಡಿರುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಮುಖಂಡರಿಬ್ಬರಿಗೂ ಈ ಹಿಂದೆ ಅರಣ್ಯ ಹಕ್ಕು ಕಾನೂನಿನಂತೆ ತಲಾ ಮೂರು ಎಕರೆಯಷ್ಟು ಜಾಗ ಮಂಜೂರಾಗಿದೆ. ಅಲ್ಲದೆ, ಆದಿವಾಸಿ ಗಳಿಗೆ ಸಿಗುವ ಬಹುತೇಕ ಸೌಲಭ್ಯವನ್ನು ಇವರು ಪಡೆದುಕೊಂಡಿರುವದಾಗಿ ಅವರು ಮಾಹಿತಿ ನೀಡಿದರು.

-ನಾಗರಾಜಶೆಟ್ಟಿ.