ಕುಶಾಲನಗರ, ಮೇ 6: ವಾಸವಿ ಜಯಂತಿ ಅಂಗವಾಗಿ ಕುಶಾಲನಗರ ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಕುಶಾಲನಗರ ವಾಸವಿ ಮಹಲ್ ಮತ್ತು ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಾಸವಿ ಜಯಂತಿ ಪ್ರಯುಕ್ತ ಕಾವೇರಿ ನದಿಯಿಂದ ಕಲಶ ತರುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಗಂಗಾಜಲವನ್ನು ತಂದ ನಂತರ ಕುಲಬಾಂಧವರು ಮಹಾಸಂಕಲ್ಪದೊಂದಿಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಂತರ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಹೋಮ, ಪೂರ್ಣಾಹುತಿಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮಾತೆಯ ಮೆರವಣಿಗೆ ನಡೆಯಿತು. ಜಯಂತಿ ಅಂಗವಾಗಿ ಸ್ಥಳೀಯ ವಾಸವಿ ಮಹಲ್‍ನಲ್ಲಿ ಸಮುದಾಯ ಬಾಂಧವರು ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಾಸವಿ ಜಯಂತಿ ಅಂಗವಾಗಿ ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿಯಿಂದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ಎಂ.ಕೆ. ದಿನೇಶ್ ನೇತೃತ್ವದಲ್ಲಿ ಪಟ್ಟಣದ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಪ್ರತಿನಿಧಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಮತ್ತು ಪದಾಧಿಕಾರಿಗಳು, ವಿವಿಧ ದೇವಾಲಯಗಳ ಪ್ರಮುಖರು ಇದ್ದರು.