ಶ್ರೀಮಂಗಲ, ಮೇ 7: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದ ಚೊಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ, ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಈಗಾಗಲೇ ಬಾಳೆಗೊನೆ ಕಡಿಯುವದರೊಂದಿಗೆ ವಿವಿಧ ಪೂಜೆ ಸಹಿತ ಅಧಿಕೃತವಾಗಿ ವಾರ್ಷಿಕೋತ್ಸವಕ್ಕೆ ನಾಂದಿ ಹಾಡಲಾಗಿದ್ದು, ತಾ. 6 ರಂದು ಇರುಬಳಕು, ಹರಕೆಬಳಕು, ಬ್ರಹ್ಮಾರ್ಪಣ, ಭಕ್ತಾದಿಗಳಿಂದ ವಿವಿಧ ಸೇವೆಗಳು, ಸತ್ಯನಾರಾಯಣ ಪೂಜೆ, ಮಹಾಪ್ರಜೆ, ನೆರ್‍ಪು, ಅಲಂಕಾರ ಪೂಜೆ ನಡೆಯಿತು. ತಾ. 7 ರಂದು ನಿತ್ಯ ಪೂಜೆ, ಅಭಿಷೇಕ ಪೂಜೆಯೊಂದಿಗೆ ಸಂಜೆ ಚಾಮುಂಡಿ ದೇವಿಯ ಅವಬೃತ ಸ್ನಾನ ನೆರವೇರಿತು. ತಾ. 8 ರಂದು (ಇಂದು) ರಾತ್ರಿ 10 ಗಂಟೆಗೆ ಚೆಕ್ಕೇರ ಸುಬ್ಬಯ್ಯ ಅವರ ಮನೆಯಿಂದ ದೈವ ಉಪಾಸಕರು ಮೆರವಣಿಗೆಯಲ್ಲಿ ಶ್ರೀ ಪಾಲ್ ಪಾರ್ ಚಾಮುಂಡಿ ದೇವಿಯ ದೇವಸ್ಥಾನಕ್ಕೆ ಬಂದು ಚಾಮುಂಡಿ ದೇವರ ತೋತ ತೆರೆ, ಕುಟ್ಟಿಚಾತ ತೆರೆ, ಬೈರವ ತೆರೆ, ಕರಿವಾಳ್ ಭಗವತಿ ತೆರೆ ಹಾಗೂ ನುಚ್ಚುಟ್ಟೆ ತೆರೆ ಕಟ್ಟಲಾಗುವದು. ತಾ. 9 ರಂದು ಪೂರ್ವಾಹ್ನ 10 ಗಂಟೆಗೆ ಚೆಕ್ಕೇರ ಸುಬ್ಬಯ್ಯ ಅವರಿಂದ ಚಾಮುಂಡಿ ದೇವಿಯ ಉಪಾಸನೆಯೊಂದಿಗೆ ವಿಷ್ಣು ಮೂರ್ತಿ ತೆರೆ ಕಟ್ಟಲಾಗುವದು. ಈ ಸಂದರ್ಭ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಅನ್ನದಾನ, 1.30 ಗಂಟೆಗೆ ಚಾಮುಂಡಿ ದೇವಿಯ ಅಗ್ನಿ ಸ್ನಾನ, ವಿಷ್ಣುಮೂರ್ತಿ ದೇವರ ಅಗ್ನಿಕುಂಡ ಪ್ರವೇಶ ಹಾಗೂ ಭಕ್ತಾದಿಗಳ ಅಗ್ನಿಕುಂಡ ಪ್ರವೇಶ ನಡೆಯುವದು. ಸಂಜೆ 4.30 ಗಂಟೆಗೆ ಗುಳಿಗ (ಕುಳಿಯ) ತೆರೆ, ಸಂಜೆ 6 ಗಂಟೆಗೆ ಭಕ್ತಾದಿಗಳು ಹರಕೆ ಒಪ್ಪಿಸಿದ ನಂತರ ರಾತ್ರಿ 10 ಗಂಟೆಗೆ ಫಲಾಹಾರ ಹಾಗೂ ಊಟದೊಂದಿಗೆ ಹಬ್ಬ ಮುಕ್ತಾಯಗೊಳ್ಳಲಿದೆ.