ವೀರಾಜಪೇಟೆ, ಮೇ 6: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಜೆ.ಪಿ.ಯ ಹಿರಿಯ ಸದಸ್ಯ ಇ.ಸಿ. ಜೀವನ್ ಆಯ್ಕೆಯಾಗುವದು ಬಹುತೇಕ ಖಚಿತವಾಗಿದ್ದು, ತಾ. 8 ರಂದು ನಡೆಯುವ ಅಧ್ಯಕ್ಷ ಪದವಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಭಾರತೀಯ ಜನತಾ ಪಾರ್ಟಿಯ ವರಿಷ್ಠ ಮಂಡಳಿ ಜೀವನ್ ಅವರನ್ನು ಅಧ್ಯಕ್ಷ ಪದವಿಗೆ ಆಯ್ಕೆ ಮಾಡಲು ಹಸಿರು ನಿಶಾನೆ ತೋರಿಸಿದ್ದಾರೆ. ಜೀವನ್ ಅವರು ಚುನಾವಣೆಯಲ್ಲಿ ಪಕ್ಷದ ಪರವಾಗಿ ಒಬ್ಬರೇ ನಾಮಪತ್ರ ಸಲ್ಲಿಸಲಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ಹದಿನಾರು ಮಂದಿ ಚುನಾಯಿತ ಸದಸ್ಯರುಗಳಿದ್ದು, ಈ ಪೈಕಿ ಹತ್ತು ಮಂದಿ ಬಿ.ಜೆ.ಪಿ. ಸದಸ್ಯರು ಎರಡು ಮಂದಿ ಕಾಂಗ್ರೆಸ್ ಸದಸ್ಯರುಗಳು ಹಾಗೂ ನಾಲ್ಕು ಮಂದಿ ಜೆ.ಡಿ.ಎಸ್. ಸದಸ್ಯರುಗಳಿದ್ದು, ಬಿ.ಜೆ.ಪಿ. ಸ್ಪಷ್ಟ ಬಹುಮತವನ್ನು ಪಡೆದಿರುವದರಿಂದ ಅವಿರೋಧ ಆಯ್ಕೆಗೆ ಹೆಚ್ಚಿನ ಅವಕಾಶವಿದೆ. ಕಳೆದ ಒಂದು ವರ್ಷದ ಹಿಂದೆ ಪಕ್ಷದ ವರಿಷ್ಠರು ಸಚಿನ್ ಕುಟ್ಟಯ್ಯ ಅವರಿಗೆ ಒಂದು ವರ್ಷದ ಅವಧಿಗೆ ಅಧ್ಯಕ್ಷ ಪದವಿಗೆ ಕಾಲಾವಕಾಶ ನೀಡಿದ್ದರಿಂದ ಅವಧಿ ಮುಗಿಸಿ ಸಚಿನ್ ಕುಟ್ಟಯ್ಯ ಈಗಾಗಲೇ ತನ್ನ ಪದವಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕಾರದ ನಂತರ ಈಗ ಎಂಟು ದಿನಗಳ ಹಿಂದೆ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಅವರಿಗೆ ಪ್ರಬಾರ ಅಧ್ಯಕ್ಷರಾಗಿ ಅಧಿಕಾರ ನೀಡಲಾಗಿತ್ತು.
ಪಟ್ಟಣ ಪಂಚಾಯಿತಿಯ ಈಗಿನ ಆಡಳಿತ ಮಂಡಳಿಗೆ ಇನ್ನು ಹದಿನೆಂಟು ತಿಂಗಳ ಅಧಿಕಾರವಿದ್ದು, ಜೀವನ್ ಅವರು ಉಳಿದ ಪೂರ್ಣಾವಧಿಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಅವಧಿಗೆ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಯೂ ಇದೆಯೆನ್ನಲಾಗಿದ್ದು, ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಅವರ ಪದವಿಗೆ ಯಾವದೇ ತಕರಾರು ಇಲ್ಲದ್ದರಿಂದ ಮುಂದಿನ ಅವಧಿಯವರೆಗೆ ಅವರು ಮುಂದುವರೆಯಲಿದ್ದಾರೆ.
ಮಲಯಾಳಿ ಜನಾಂಗಕ್ಕೆ ಪ್ರಥಮ ಆದ್ಯತೆ
ಪಟ್ಟಣ ಪಂಚಾಯಿತಿ ಸದಸ್ಯ ಇ.ಸಿ. ಜೀವನ್ ಅವರ ಆಯ್ಕೆಯಿಂದ ವೀರಾಜಪೇಟೆ ಪಟ್ಟಣದ ಮಲಯಾಳಿ ಸಮುದಾಯಕ್ಕೆ ಪ್ರಪ್ರಥಮವಾಗಿ ಆದ್ಯತೆ ನೀಡಿದಂತಾಗುತ್ತದೆ. ಈ ಹಿಂದೆ ಮುಸ್ಲಿಂ, ಹಿಂದುಳಿದ ವರ್ಗ, ಹರಿಜನ ಗಿರಿಜನರು, ಕೊಡವರು, ಹಿಂದೂಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪದವಿಯಲ್ಲಿ ಸೇವೆ ಸಲ್ಲಿಸಿದ ದಾಖಲೆ ಇದೆ. ಆದರೆ ಮೊದಲ ಬಾರಿಗೆ ಜೀವನ್ ಅವರ ಆಯ್ಕೆ ಮಲಯಾಳಿ ಸಮುದಾಯಕ್ಕೆ ಅವಕಾಶ ದೊರೆತಂತಾಗಿದೆ.
ಜೀವನ್ ಅವರ ಸಂಕ್ಷಿಪ್ತ ಪರಿಚಯ
ಇ.ಸಿ. ಜೀವನ್ ಅವರು ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 5 ವರ್ಷಗಳ ಕಾಲ ನಾಮಕರಣ ಸದಸ್ಯರಾಗಿ ಸೇವೆ ಸಲ್ಲಿಸಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಈಗಿನ ಪಂಚಾಯಿತಿಯಲ್ಲಿ ಮೂರೂವರೆ ವರ್ಷಗಳ ಕಾಲ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇಲ್ಲಿನ ಪಂಜರ್ಪೇಟೆಯ ನಿವಾಸಿಯಾಗಿರುವ ಜೀವನ್ ಅವರು ಪಕ್ಷದ ನಗರ ಸಮಿತಿ, ತಾಲೂಕು ಸಮಿತಿ ಹಾಗೂ ಜಿಲ್ಲಾ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಈಗ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಸದಸ್ಯರಾಗಿದ್ದಾರೆ. ವೀರಾಜಪೇಟೆ ಮಲಬಾರ್ ರಸ್ತೆಯಲ್ಲಿರುವ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಟ್ರಸ್ಟಿಯಾಗಿ, ಓಣಂ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾ. 8 ರಂದು ಅಧ್ಯಕ್ಷ ಪದವಿಯ ಚುನಾವಣೆಯನ್ನು ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮಹದೇವಸ್ವಾಮಿ ನಡೆಸಲಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಅಪರಾಹ್ನ 2.30 ಗಂಟೆಗೆ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ.