ಮಡಿಕೇರಿ, ಮೇ 7: ಇಲಾಖೆಯ ನಿಯಮ ಉಲ್ಲಂಘಿಸಿ, ವ್ಯಕ್ತಿಯೊಬ್ಬರು ಬೀಟೆ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟಕ್ಕೆ ಯತ್ನಿಸಿರುವ ಪ್ರಕರಣವೊಂದರಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿರುವ ಅರಣ್ಯಾಧಿಕಾರಿಗಳ ಮೇಲೆ ದುರುದ್ದೇಶದಿಂದ ಪೊಲೀಸರಿಗೆ ಸುಳ್ಳು ಪುಕಾರು ನೀಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜನ್ ಸ್ಪಷ್ಟೀಕರಣ ನೀಡಿದ್ದಾರೆ. ಹಾತೂರು ನಿವಾಸಿ ಉತ್ತಯ್ಯ ಎಂಬವರು ತನ್ನ ಜಾಗದಿಂದ 3 ಬೀಟೆ ಮರಗಳನ್ನು ಕಡಿಯಲು ಇಲಾಖೆಯ ಅನುಮತಿ ಪಡೆದಿದ್ದು, ಕಾನೂನು ಉಲ್ಲಂಘಿಸಿ 5 ಬೀಟೆ ಮರಗಳನ್ನು ಕಡಿದು ಕ್ರೇನ್ ಬಳಸಿಕೊಂಡು ಲಾರಿಯಲ್ಲಿ ತುಂಬಿಸಿ ಸಾಗಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಸುಳಿವು ಪಡೆದು ಅರಣ್ಯಾಧಿಕಾರಿಗಳು ಕ್ರಮ ಜರುಗಿಸಿದ್ದ ಬಗ್ಗೆ ತಾ.6ರ ‘ಶಕ್ತಿ'ಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿದ್ದನ್ನು ಕ್ರಿಸ್ತರಾಜನ್ ನೆನಪಿಸಿದ್ದಾರೆ.

ಆ ಮೇರೆಗೆ ಸಂಬಂಧಿಸಿದ ಉತ್ತಯ್ಯ, ಬೀಟೆ ಮರ ಕಡಿದು ಸಾಗಿಸುವಲ್ಲಿ ತನ್ನೊಂದಿಗಿದ್ದ ಸಿಬ್ಬಂದಿಗಳಾದ ಪ್ರತಾಪ, ರಂಗಸ್ವಾಮಿ, ಧರ್ಮೇಶ್ ಮೂಲಕ, ಇಲಾಖೆಯ ಅಧಿಕಾರಿಗಳಾದ ಶ್ರೀಪತಿ, ಉತ್ತಯ್ಯ, ರಾಕೇಶ್ ವಿರುದ್ಧ ರಾಜಕೀಯ ಪ್ರಭಾವ ಬೆಳೆಸಿ ಸುಳ್ಳುದೂರು ದಾಖಲಿಸಿರು ವದಾಗಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಇಲಾಖೆಯ ಅಧಿಕಾರಿಗಳ ವಿರುದ್ಧ ದೂರಿನ ಸತ್ಯಾಂಶವನ್ನು ಬಯಲಿಗೆಳೆಯುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕೋರಲಾಗಿದೆ ಎಂದ ಅವರು, ಇಲಾಖೆಯ ಸ್ಥೈರ್ಯ ಕುಗ್ಗಿಸುವ ಕೆಲಸ ಜವಾಬ್ದಾರಿಯುತರಿಂದ ಆಗದಿರಲೆಂದೂ, ಅಕ್ರಮ ದಂಧೆಗೆ ಯಾರೂ ಕುಮ್ಮಕ್ಕು ನೀಡಬಾರದೆಂದು ಕಳಕಳಿ ವ್ಯಕ್ತಪಡಿಸಿದ್ದಾರೆ.